ಎಂತಹ ವ್ಯಕ್ತಿಗಳಿಗೆ ಸಂಪತ್ತು ಮತ್ತು ಯಶಸ್ಸು ಸಿಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಆದರೆ, ನಿರ್ದಿಷ್ಟ ರೀತಿಯ ಆಲೋಚನಾ ವಿಧಾನ ಮತ್ತು ಮನೋಭಾವ (Mindset) ಹೊಂದಿರುವವರಿಗೆ ಶ್ರೀಮಂತರಾಗುವ ಅವಕಾಶಗಳು ಹೆಚ್ಚು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.
ಯಾರಿಗೆ ಸಂಪತ್ತು ಒಲಿಯುತ್ತದೆ ಮತ್ತು ಯಾರು ಜೀವನದಲ್ಲಿ ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ ಎಂಬುದು ಕೇವಲ ಅದೃಷ್ಟದ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ, ಒಬ್ಬ ವ್ಯಕ್ತಿಯ ಆಲೋಚನಾ ಶೈಲಿ ಮತ್ತು ಜೀವನದ ಕಡೆಗಿನ ಅವರ ದೃಷ್ಟಿಕೋನವೇ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಮನಃಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ತಾತ್ಕಾಲಿಕ ಸುಖವನ್ನು ತ್ಯಜಿಸುವ ತಾಳ್ಮೆ, ಸತತ ಕಲಿಕೆ, ಶಿಸ್ತು ಮತ್ತು ಭಾವನೆಗಳ ಮೇಲಿನ ನಿಯಂತ್ರಣ—ಈ ಐದು ಪ್ರಮುಖ ಲಕ್ಷಣಗಳನ್ನು ಅಳವಡಿಸಿಕೊಂಡವರು ದೀರ್ಘಕಾಲದಲ್ಲಿ ದೊಡ್ಡ ಮಟ್ಟದ ಆಸ್ತಿ ಮತ್ತು ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಇತ್ತೀಚಿನ ಸಂಶೋಧನಾ ವರದಿಗಳು ತಿಳಿಸಿವೆ. ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಇರಬೇಕಾದ ಆ ಲಕ್ಷಣಗಳು ಯಾವುವು ಎಂದು ತಿಳಿಯೋಣ:
1. ತಾಳ್ಮೆ ಮತ್ತು ಮುಂದಾಲೋಚನೆ
ದೀರ್ಘಕಾಲದ ಗುರಿಗಳಿಗಾಗಿ ತಾತ್ಕಾಲಿಕ ಸುಖಗಳನ್ನು ತ್ಯಾಗ ಮಾಡುವವರು ಜೀವನದಲ್ಲಿ ಸರಿಯಾದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿ ಶ್ರೀಮಂತರಾಗುವ ಸಾಧ್ಯತೆ ಹೆಚ್ಚಿರುತ್ತದೆ.
2. ಕಲಿಕೆಯ ಮನೋಭಾವ (Growth Mindset)
ಕಷ್ಟಪಟ್ಟು ಕೆಲಸ ಮಾಡಿದರೆ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ನಂಬುವವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಇವರು ತಮ್ಮ ತಪ್ಪುಗಳಿಂದ ಪಾಠ ಕಲಿಯುತ್ತಾರೆಯೇ ಹೊರತು, ವೈಫಲ್ಯವನ್ನು ಅಂತ್ಯ ಎಂದು ಭಾವಿಸುವುದಿಲ್ಲ. ಇಂತಹ ಧೋರಣೆ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ಶಕ್ತಿ ನೀಡುತ್ತದೆ.
3. ಶಿಸ್ತು ಮತ್ತು ಸ್ಥಿರತೆ
ಶಿಸ್ತುಬದ್ಧ ಜೀವನ ಮತ್ತು ಕೆಲಸದಲ್ಲಿ ನಿರಂತರತೆಯನ್ನು (Consistency) ಕಾಪಾಡಿಕೊಳ್ಳುವವರಿಗೆ ಸಂಪತ್ತು ಯಾವುದೋ ಒಂದು ದಿನ ಖಂಡಿತವಾಗಿ ಒಲಿಯುತ್ತದೆ. ಇವರು ಸಣ್ಣ ಸಣ್ಣ ಹೆಜ್ಜೆಗಳ ಮೂಲಕ ತಮ್ಮ ಕೌಶಲವನ್ನು ಉತ್ತಮಪಡಿಸಿಕೊಳ್ಳುತ್ತಾ ಗುರಿಯತ್ತ ಸಾಗುತ್ತಾರೆ.
4. ಭಾವನೆಗಳ ಮೇಲೆ ನಿಯಂತ್ರಣ
ಆರ್ಥಿಕ ನಿರ್ಧಾರಗಳು ಹೆಚ್ಚಾಗಿ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಸಂಕಷ್ಟದ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳದೆ, ಭಾವೋದ್ವೇಗಕ್ಕೆ ಒಳಗಾಗದೆ ನಿರ್ಧಾರ ತೆಗೆದುಕೊಳ್ಳುವವರು ಆರ್ಥಿಕವಾಗಿ ನಷ್ಟ ಅನುಭವಿಸುವುದು ಕಡಿಮೆ. ಕಠಿಣ ಸಂದರ್ಭಗಳಲ್ಲಿ ಸಂಯಮ ಕಾಯ್ದುಕೊಳ್ಳುವವರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ.
5. ಜವಾಬ್ದಾರಿಯುತ ನಡವಳಿಕೆ
ತಮ್ಮ ಏಳಿಗೆಗೆ ತಾವೇ ಜವಾಬ್ದಾರರು ಎಂದು ನಂಬುವವರು ಇತರರ ಮೇಲೆ ಗೂಬೆ ಕೂರಿಸದೆ ಮುನ್ನುಗ್ಗುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಧೈರ್ಯ ಮತ್ತು ಓರ್ಪಿನಿಂದ ನಿಭಾಯಿಸುವ ಇಂತಹ ಗುಣವು ದೀರ್ಘಕಾಲದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ.
ಗಮನಿಸಿ: ಈ ಎಲ್ಲಾ ಲಕ್ಷಣಗಳ ಜೊತೆಗೆ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸ್ವಲ್ಪ ಮಟ್ಟಿನ ಅದೃಷ್ಟವೂ ಬೇಕು ಎನ್ನುತ್ತಾರೆ ತಜ್ಞರು.

