ಬೆಂಗಳೂರು : ಬೇಸಿಗೆಯ ಬಿಸಿಲ ಅಬ್ಬರ ಹೆಚ್ಚಾಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ತಾಪಮಾನ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಮುಂದಿನ 4-5 ದಿನಗಳ ಕಾಲ ಬಿಸಿಲ ಧಗೆ ಮತ್ತಷ್ಟು ಹೆಚ್ಚಾಗಲಿದ್ದು, ಹವಾಮಾನ ಇಲಾಖೆ ತಾಪಮಾನ ಏರಿಕೆಯ ಮುನ್ನೆಚ್ಚರಿಕೆ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಸದ್ಯ 35°C ಇರುವ ತಾಪಮಾನವು ಮುಂದಿನ ದಿನಗಳಲ್ಲಿ 37°C ರಿಂದ 38°C ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಪಾದರಸ 42°C ರಿಂದ 44°C ವರೆಗೆ ತಲುಪುವ ಭೀತಿ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ 35 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಇದು 37 ರಿಂದ 38 ಡಿಗ್ರಿ ವರೆಗೆ ಏರಿಕೆಯಾಗಬಹುದು.
ಸಮಯದ ಬಗ್ಗೆ ಗಮನವಿರಲಿ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಈ ಸಮಯದಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಆಚೆ ಬರದಂತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರ ಒಳನಾಡು: ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನವು 42 ರಿಂದ 44 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುವ ಸಾಧ್ಯತೆ ಇದೆ.
ಇತರ ಜಿಲ್ಲೆಗಳು: ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಾಗಬಹುದು. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲೂ 2 ರಿಂದ 3 ಡಿಗ್ರಿ ತಾಪಮಾನ ಏರಿಕೆಯ ಮುನ್ಸೂಚನೆ ಇದೆ.

