ಬೆಂಗಳೂರು: ಪಿಗ್ಮಿ ಏಜೆಂಟರು ಬ್ಯಾಂಕ್ ನೌಕರರಾಗಿದ್ದು, ಅವರು ಸಂಗ್ರಹಿಸುವ ಠೇವಣಿಗೆ ಪ್ರತಿಯಾಗಿ ನೀಡುವ ವೇತನಕ್ಕೆ ಜಿಎಸ್ಟಿ ವಿಧಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಉಪ ಆಯುಕ್ತರು ಬೆಳಗಾವಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಪಿಗ್ಮಿ ಏಜೆಂಟರು ಬ್ಯಾಂಕುಗಳ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ. ಅವರ ಅವರು ಸಂಗ್ರಹಿಸುವ ಠೇವಣಿ ಮೇಲೆ ಬ್ಯಾಂಕ್ ನಿಯಂತ್ರಣವಿರುತ್ತದೆ. ಅವರಿಗೆ ಕಮಿಷನ್ ರೂಪದಲ್ಲಿ ನೀಡುವ ವೇತನವನ್ನು ಬ್ಯಾಂಕ್ ನಿಯಂತ್ರಿಸುತ್ತದೆ. ಸಂಗ್ರಹಿಸುವ ಹಣವು ಬ್ಯಾಂಕ್ ನಲ್ಲಿ ಇಡಲಾಗುತ್ತದೆ. ಬ್ಯಾಂಕ್ ನೌಕರರಂತೆ ಸೌಲಭ್ಯಗಳನ್ನು ನೀಡಲಾಗುತ್ತದೆ. ನೌಕರ, ಉದ್ಯೋಗದಾತರೊಂದಿಗೆ ಏಜೆಂಟ್ ಮತ್ತು ಬ್ಯಾಂಕು ನಡುವೆ ಸಂಬಂಧವಿರುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ..
ಪಿಗ್ಮಿ ಏಜೆಂಟರಿಗೆ ನೀಡುವ ಕಮಿಷನ್ ಮೇಲೆ ರಿವರ್ಸ್ ಚಾರ್ಜ್ ವ್ಯವಸ್ಥೆಯಡಿ ಜಿಎಸ್ಟಿ ಪಾವತಿಸುವ ಸಂಬಂಧ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.

