ಭಾರತದಲ್ಲಿ ಜನರಿಗೆ ತಮ್ಮನ್ನು ಪ್ರತಿನಿಧಿಸುವ ರಾಜಕಾರಣಿಗಳಿಗಿಂತ ಸಿನಿಮಾ ನಟರು ಹಾಗೂ ಕ್ರಿಕೆಟಿಗರೆಂದರೆ ಹೆಚ್ಚಿನ ಒಲವು. ಪರದೆ ಮೇಲೆ ಕಾಣಿಸಿಕೊಳ್ಳುವ ನಟನ ಹಾಗೆ ಸ್ಟೈಲ್ ಮಾಡುವುದು ಹಾಗೂ ಕ್ರೀಡಾಂಗಣದಲ್ಲಿ ನೆಚ್ಚಿನ ಆಟಗಾರನ ನಡವಳಿಕೆ ಅನುಕರಣೆ ಮಾಡುವುದನ್ನು ಯುವ ಜನರಲ್ಲಿ ಕಾಣಬಹುದುದಾಗಿದೆ.
ಇನ್ನು ಎಲ್ಲ ಕ್ರಿಕೆಟಿಗರು ಹಾಗೂ ಸಿನಿಮಾ ನಟರು ಅಭಿಮಾನಿಗಳ ಈ ರೂಢಿಗೆ ತಕ್ಕನಾದ ಸ್ವಭಾವ ಹೊಂದಿದ್ದಾರಾ ಎಂದರೆ ಅದಕ್ಕೆ ಉತ್ತರ ಇಲ್ಲ. ಎಲ್ಲೋ ಕೆಲ ಸೆಲೆಬ್ರಿಟಿಗಳು ಮಾತ್ರ ಅಭಿಮಾನಿಗಳಿಗೆ ಒಳ್ಳೆಯ ಸಂದೇಶಗಳನ್ನು ಕೊಟ್ಟು, ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಒಳ್ಳೆಯ ಗುಣವನ್ನು ಹೊಂದಿರುತ್ತಾರೆ.
ಬಹುತೇಕ ಸೆಲೆಬ್ರಿಟಿಗಳ ಹೆಸರು ಸಿನಿಮಾ ಅಥವಾ ಕ್ರಿಕೆಟ್ ಹೊರತುಪಡಿಸಿ ಹೆಚ್ಚಾಗಿ ಕೇಳಿಬರುವುದು ವಿವಾದಗಳಿಂದಲೇ. ಇಂತಹ ಸೆಲೆಬ್ರಿಟಿಗಳ ಪೈಕಿ ಕೆಲವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಜೀವನದ ಕಡೆ ಸಾಗಿದರೆ ಇನ್ನೂ ಕೆಲವರು ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬಂತೆ ಬೇಕಾಬಿಟ್ಟಿ ಬದುಕು ಸಾಗಿಸಲು ಮುಂದಾಗುತ್ತಾರೆ ಹಾಗೂ ಮತ್ತಷ್ಟು ವಿವಾದಗಳಿಗೆ ಕಾರಣರಾಗುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ ಭಾರತದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಹಲ್. ಹೌದು, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಆಟಗಾರ ಯುಜ್ವೇಂದ್ರ ಚಹಲ್ ತಮ್ಮ ಐಷಾರಾಮಿ ಕಾರನ್ನು ವೇಗವಾಗಿ ಚಾಲನೆ ಮಾಡುತ್ತಿದ್ದು, ಇದೇ ವೇಳೆ ಧೂಮಪಾನ ಮಾಡಿದ್ದಾರೆ. ಅಲ್ಲದೇ ಕೊನೆಗೆ ಉಳಿದ ಸಿಗರೇಟನ್ನು ಕೆಂಡದ ಜೊತೆಗೆ ಸಾರ್ವಜನಿಕರು ಪ್ರಯಾಣಿಸುವ ರಸ್ತೆಗೆ ಎಸೆದಿದ್ದಾರೆ.
ಹಿಂದೆ ಮುಂದೆ ಯಾರಾದರೂ ಬರುತ್ತಿದ್ದಾರಾ ಎಂಬುದನ್ನೂ ಸಹ ಗಮನಿಸದೇ ಬೇಕಾಬಿಟ್ಟಿ ವರ್ತನೆ ತೋರಿ ಸಿಗರೇಟ್ ಬಿಸಾಡಿರುವ ಚಹಲ್ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದ ದುಡ್ಡಿನ ಮದ ಎಂಬ ಕಾಮೆಂಟ್ ಹರಿದುಬರುತ್ತಿವೆ.

