ಬೆಂಗಳೂರು : ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ.
ಏಪ್ರಿಲ್ 6 ರಂದು ಈ ಘಟನೆ ನಡೆದಿದ್ದು, ಇದರ ಎದೆ ಝಲ್ ಎನ್ನುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಮನೆಯ ಮೂರನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ. ಮಗು ಬೀಳುತ್ತಿದ್ದಂತೆಯೇ ಅದರ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಸ್ಥಳದಲ್ಲೇ ರಕ್ತಸ್ರಾವವಾಗಿದೆ. ಮಗು ಕೆಳಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಯಿಂದ ಓಡಿಬಂದ ತಾಯಿ, ಮಗುವಿನ ಸ್ಥಿತಿಯನ್ನು ಕಂಡು ರಸ್ತೆ ಮಧ್ಯೆಯೇ ಮೂರ್ಛೆ ಹೋಗಿ ಬಿದ್ದಿದ್ದಾರೆ. ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಕೂಡಲೇ ಕುಟುಂಬದವರು ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವನ್ನು ಐಸಿಯುನಲ್ಲಿ (ICU) ಇರಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ನಾಯಂಡಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಪ್ರಾಣ ಉಳಿಯಲಿ ಎಂದು ಪೋಷಕರು ಮತ್ತು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.

