ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ನಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದು, ಪತಿ ಶವದ ಜೊತೆಗೆ ಮಾನಸಿಕ ಅಸ್ವಸ್ಥ ಪತ್ನಿ ಹತ್ತು ದಿನ ಕಳೆದಿದ್ದಾರೆ.
ಬಣಕಲ್ ಸುಭಾಷ್ ನಗರದ ಸಿರಿಲ್ ಮೋನಿಸ್(77) ಮೃತಪಟ್ಟವರು. ಅವರ ಮಗ ಮೆಲ್ವಿನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರಿ ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಸಿರಿಲ್ ಮೋನಿಸ್ ಅವರಿಗೆ ಚಿಕಿತ್ಸೆ ಕೊಡಿಸಿದ ಪುತ್ರ ಬೆಂಗಳೂರಿಗೆ ತೆರಳಿದ್ದರು.
ತಾಯಿ ಸಿಸಿಲ್ ಮಾನಸಿಕ ಅಸ್ವಸ್ಥರಾಗಿದ್ದು, ಅವರಿಗೆ ಆಗಾಗ ಕರೆ ಮಾಡಿ ಪುತ್ರ ತಂದೆಯ ಆರೋಗ್ಯ ವಿಚಾರಿಸುತ್ತಿದ್ದರು. ಕರೆ ಮಾಡಿದಾಗ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರಿಂದ ತಾಯಿಯ ಮಾತನ್ನು ನಂಬಿದ ಪುತ್ರ ಸುಮ್ಮನಾಗಿದ್ದಾರೆ.
ಆದರೆ, 10 ದಿನಗಳ ಹಿಂದೆಯೇ ಸಿರಿಲ್ ಮೃತಪಟ್ಟಿದ್ದರು. ಸಿಸಿಲ್ ಲವರ ಗಮನಕ್ಕೆ ಬಂದಿಲ್ಲ. ಕೊಳೆತ ಮೃತದೇಹದ ಜೊತೆಗೆ ದಿನ ಕಳೆದಿದ್ದಾರೆ. ಪುತ್ರ ಅನುಮಾನದಿಂದ ತನ್ನ ಸ್ನೇಹಿತನನ್ನು ಮನೆಗೆ ಕಳುಹಿಸಿದಾಗ ತಂದೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಪರಿಶೀಲನೆಗೆ ಮುಂದಾಗಿದ್ದಾರೆ. ಕೊನೆಗೆ ಸಾಮಾಜಿಕ ಕಾರ್ಯಕರ್ತ ಆರಿಫ್ ನೆರವಿನೊಂದಿಗೆ ಪೊಲೀಸರ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಿ ಬಣಕಲ್ ಕ್ರೈಸ್ತರ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

