ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನು ನೊಣಗಳ ದಾಳಿಯಿಂದ 18 ಜನ ಗಾಯಗೊಂಡಿದ್ದಾರೆ. ಭದ್ರಾವತಿಯ ವಿಐಪಿಎಲ್ ಕ್ರೀಡಾಂಗಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಜೇನುನೊಣಗಳು ದಾಳಿ ನಡೆಸಿವೆ.
ರಾಜಸ್ಥಾನ ಸಮಾಜ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮೊದಲನೇ ಪಂದ್ಯ ಆರಂಭದ ವೇಳೆಯಲ್ಲಿ ಜೇನುನೊಣಗಳು ಸ್ಥಳದಲ್ಲಿದ್ದವರ ಮೇಲೆ ದಿಢೀರ್ ದಾಳಿ ನಡೆಸಿವೆ. ಇವುಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ಮತ್ತು ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ. ಜೇನುನೊಣಗಳ ದಾಳಿಯಿಂದಾಗಿ ಗಾಯಗೊಂಡ 18 ಜನರ ಪೈಕಿ ಇಬ್ಬರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

