ಚೆನ್ನೈ: ಕಾಲಿವುಡ್ ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಕಮಲ್ ಹಾಸನ್ ರಾಜಕಾರಣಕ್ಕೆ ಧುಮುಕಿ ಕೆಲ ವರ್ಷಗಳ ಹಿಂದೆ ತಮ್ಮದೇ ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಸ್ಥಾಪಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದರು. ಆರಂಭದಲ್ಲಿ ಡಿಎಂಕೆಗೆ ಸವಾಲೊಡ್ಡುವ ಪಕ್ಷ ಎಂದೇ ಬಿಂಬಿತವಾಗಿದ್ದ ಈ ಪಕ್ಷ ಬಳಿಕ ಡಿಎಂಕೆ ಜೊತೆಯೇ ಮೈತ್ರಿ ಮಾಡಿಕೊಂಡಿದೆ. ಡಿಎಂಕೆ ಎದುರಾಳಿ ಎಂದೇ ಗುರುತಿಸಿಕೊಂಡಿದ್ದ ಕಮಲ್ ಹಾಸನ್ ಸ್ವತಃ ಡಿಎಂಕೆಯಿಂದ ಸೀಟು ಪಡೆದು ರಾಜ್ಯಸಭೆ ಪ್ರವೇಶಿಸಿ ಆಯ್ಕೆಯಾದಿದ್ದಾರೆ. ಅಲ್ಲದೇ ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಅವರ ಈ ನಿರ್ಧಾರಕ್ಕೆ ಸ್ವಪಕ್ಷೀಯ ನಾಯಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಮಕ್ಕಳ್ ನಿಧಿ ಮಯಂ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ತಲಾ 50,000 ರೂಪಾಯಿ ಅರ್ಜಿ ಶುಲ್ಕವನ್ನ ನೀಡಿದ್ದರು. ‘ಮಕ್ಕಳ್ ನೀಧಿ ಮೈಯಂ’ ಪಕ್ಷ ತಲಾ 50 ಸಾವಿರ ರೂಪಾಯಿ ಸಂಗ್ರಹಿಸಿತ್ತು, ಆದರೆ ಈಗ ಸ್ವತಃ ಕಮಲ್ ಹಾಸನ್ ಅವರೇ ಚುನಾವಣೆಗೆ ಹೋಗದಿರುವ ನಿರ್ಧಾರ ಮಾಡಿದ ಬಳಿಕ, ಆಕಾಂಕ್ಷಿ ಅಭ್ಯರ್ಥಿಗಳು ನಿರಾಶರಾಗಿದ್ದಾಅರೆ. ಮಾತ್ರವೇ ಅಲ್ಲದೆ, ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ತಲಾ 50,000 ರೂ.ಗಳನ್ನು ಪಕ್ಷಕ್ಕೆ ಪಾವತಿಸಿದ್ದರು. ಆದರೆ ಈಗ ಕಮಲ್ ಹಾಸನ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಆಕಾಂಕ್ಷಿಗಳು ತಮ್ಮ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಅಭ್ಯರ್ಥಿಗಳ ಈ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪಕ್ಷದ ಪದಾಧಿಕಾರಿಗಳು, ಪಾವತಿಸಿದ ಮೊತ್ತವನ್ನು ‘ಪಕ್ಷಕ್ಕೆ ನೀಡಿದ ದೇಣಿಗೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಂಎನ್ಎಂ, ತನಗೆ ನೀಡಲಾದ ಸೀಟುಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಡಿಎಂಕೆಯ ಚಿಹ್ನೆಯಡಿ ಸ್ಪರ್ಧಿಸುವಂತೆ ಬಂದ ಸಲಹೆಯನ್ನು ಒಪ್ಪದ ಕಾರಣ ಏಪ್ರಿಲ್ 23ರ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತ್ತು. ಕಮಲ್ ಹಾಸನ್ ಅವರು ತಮ್ಮ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದ ಅಭ್ಯರ್ಥಿಗಳಿಗೆ ಇದು ತೀವ್ರ ಅಸಮಾಧಾನ ಮೂಡಿಸಿದೆ. ಇದರಿಂದ ಕಮಲ್ ಹಾಸನ್ ವಿರುದ್ಧ ಸ್ವಪಕ್ಷದ ನಾಯಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

