ಬೆಂಗಳೂರು: ರಸ್ತೆಯಲ್ಲಿ ವೀಲಿಂಗ್ ಮತ್ತು ಅಪಾಯಕಾರಿ ಬೈಕ್ ಸ್ಟಂಟ್ ಮಾಡುವುದು ಕೇವಲ ಸಾಹಸವಲ್ಲ, ಅದು ಸಾವಿನೊಂದಿಗಿನ ಆಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಅಪ್ರಾಪ್ತರು ಮತ್ತು ಯುವಕರ ಈ ಜೀವದ ಹಂಗಿಲ್ಲದ ಆಟಕ್ಕೆ ಬರೋಬ್ಬರಿ 27 ಮಂದಿ ಬಲಿಯಾಗಿದ್ದಾರೆ.
ಬೈಕ್ ಸ್ಟಂಟ್ ಮತ್ತು ಅಕ್ರಮ ಚಾಲನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ 1,805 ಪ್ರಕರಣಗಳಿಂದ ಬರೊಬ್ಬರಿ 1.77 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ. ವಿಶೇಷವೆಂದರೆ, ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಈಗ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸುತ್ತಿದ್ದು, ಬೆಂಗಳೂರು ನಗರವೊಂದರಲ್ಲೇ ಸ್ಟಂಟ್ ಮಾಡಲೆಂದೇ ಗುರುತಿಸಿಕೊಂಡಿರುವ 37 ಹಾಟ್‌ಸ್ಪಾಟ್‌ಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಸಾವಿನ ಸಂಖ್ಯೆ ಏರಿಕೆ: ಕಳೆದ 3 ವರ್ಷಗಳಲ್ಲಿ ಬೈಕ್ ಸ್ಟಂಟ್ ಮತ್ತು ಅಪಾಯಕಾರಿ ಚಾಲನೆಯಿಂದ 27 ಸಾವುಗಳು ಸಂಭವಿಸಿವೆ. ಇದರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಕರೇ ಆಗಿರುವುದು ಆತಂಕಕಾರಿ ಸಂಗತಿ.
·ಬೆಂಗಳೂರು ನಂಬರ್ 1: ಅಪಾಯಕಾರಿ ಚಾಲನೆ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ 240 ರಿಂದ 632ಕ್ಕೆ ಏರಿಕೆಯಾಗಿದೆ.
·ಪೋಷಕರಿಗೆ ಎಚ್ಚರಿಕೆ: ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಪೋಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಅಪಾಯಕಾರಿ ಚಾಲನೆ ಮತ್ತು ಬೈಕ್ ಸ್ಟಂಟ್‌ಗಳಿಗೆ ಸಂಬಂಧಿಸಿದಂತೆ ಒಟ್ಟು 1,805 ಪ್ರಕರಣಗಳು ದಾಖಲಾಗಿವೆ.ಈ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಒಟ್ಟು 1.77 ಕೋಟಿ ರೂ. ದಂಡವನ್ನು ವಸೂಲಿ ಮಾಡಿದ್ದಾರೆ. ಅಕ್ರಮ ಮತ್ತು ಅಪಾಯಕಾರಿ ಚಾಲನೆ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ತುಮಕೂರು ಮತ್ತು ಕೊಡಗು ನಂತರದ ಸ್ಥಾನಗಳಲ್ಲಿವೆ.
ನಗರವಾರು ಅಂಕಿ-ಅಂಶಗಳು (ಬೆಂಗಳೂರು):
- 2023: 240 ಪ್ರಕರಣಗಳು – ₹18.31 ಲಕ್ಷ ದಂಡ
- 2024: 378 ಪ್ರಕರಣಗಳು – ₹16.99 ಲಕ್ಷ ದಂಡ
- 2025: 632 ಪ್ರಕರಣಗಳು – ₹15.65 ಲಕ್ಷ ದಂಡ
ಪೊಲೀಸರ ಕಠಿಣ ಕ್ರಮಗಳು:
- ಪೋಷಕರ ವಿರುದ್ಧ ಕೇಸ್: ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಕೇವಲ ಅವರ ಮೇಲೆ ಮಾತ್ರವಲ್ಲದೆ, ವಾಹನ ನೀಡಿದ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ.
- ನೋಂದಣಿ ರದ್ದು: ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ರದ್ದುಗೊಳಿಸಲು ಆಯಾ ಆರ್‌ಟಿಒ (RTO) ಕಚೇರಿಗಳಿಗೆ ಪೊಲೀಸರು ಶಿಫಾರಸು ಮಾಡುತ್ತಿದ್ದಾರೆ.
- ಹಾಟ್‌ಸ್ಪಾಟ್‌ಗಳ ಗುರುತಿಸುವಿಕೆ: ಬೆಂಗಳೂರು ನಗರದಲ್ಲಿ ವೀಲಿಂಗ್ ಮತ್ತು ಸ್ಟಂಟ್ ತಡೆಯಲು ಪೊಲೀಸರು 37 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಅಲ್ಲಿ ಸಿಸಿಟಿವಿ ಮತ್ತು ಹೆಚ್ಚಿನ ಭದ್ರತೆಯ ಮೂಲಕ ಕಠಿಣ ನಿಗಾ ವಹಿಸಲಾಗಿದೆ.
ಪ್ರತಿ ವರ್ಷ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಯುವಕರ ಈ ಅಪಾಯಕಾರಿ ಕ್ರೇಜ್ ಕಡಿಮೆಯಾಗುತ್ತಿಲ್ಲ ಎಂಬುದು ಈ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

