ಕಲಬುರಗಿ: ಎರಡು ದಿನಗಳ ಹಿಂದಷ್ಟೇ ಭೀಮಾ ನದಿಯಲ್ಲಿ ಈಜಲು ಹೋಗಿದ್ದ 19 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಭೀಮಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುಂಡಲೀಕ ಮೂಲಿಮನಿ (17) ಹಾಗೂ ಮಹೇಶ್ (16) ಮೃತ ವಿದ್ಯಾರ್ಥಿಗಳು. ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದವರು ಎಂದು ತಿಳಿದುಬಂದಿದೆ.
ಹರಕೆ ತೀರಿಸಲು ಮಣ್ಣೂರು ಯಲ್ಲಮ್ಮನ ದೇಗುಲಕ್ಕೆ ಬಂದಿದ್ದರು. ಈ ವೇಳೆ ಭೀಮಾ ನದಿಯಲ್ಲಿ ಈಜಲು ಇಳಿದಿದ್ದರು. ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

