ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಬೋರ್ಡಿಂಗ್ ಸ್ಟೇಷನ್ (ರೈಲು ಹತ್ತುವ ನಿಲ್ದಾಣ) ಬದಲಿಸುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಮೊದಲು ರೈಲು ಹೊರಡುವ 24 ಗಂಟೆಗಳ ಮೊದಲು ಮಾತ್ರ ಈ ಅವಕಾಶವಿತ್ತು, ಆದರೆ ಈಗ ರೈಲು ಹೊರಡುವ ಕೇವಲ 30 ನಿಮಿಷಗಳ ಮೊದಲು ಕೂಡ ನೀವು ರೈಲು ಹತ್ತುವ ನಿಲ್ದಾಣವನ್ನು ಬದಲಾಯಿಸಬಹುದು.
ಏನಿದು ಹೊಸ ನಿಯಮ ?
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 1 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡಿದ ನಿಲ್ದಾಣಕ್ಕೆ ಹೋಗಲು ತಡವಾದರೆ ಅಥವಾ ರೈಲು ಮಿಸ್ ಆಗುವ ಆತಂಕವಿದ್ದರೆ, ತಕ್ಷಣವೇ ನಿಮ್ಮ ಮುಂದಿನ ನಿಲ್ದಾಣಕ್ಕೆ ಬೋರ್ಡಿಂಗ್ ಪಾಯಿಂಟ್ ಬದಲಿಸಿಕೊಳ್ಳಬಹುದು.
ಬೋರ್ಡಿಂಗ್ ಸ್ಟೇಷನ್ ಬದಲಿಸುವುದು ಹೇಗೆ ? ಈ ಪ್ರಕ್ರಿಯೆಯು ಈಗ ಅತ್ಯಂತ ಸುಲಭವಾಗಿದೆ
- ಆನ್‌ಲೈನ್ ಮೂಲಕ: IRCTC ಅಧಿಕೃತ ಆಪ್ ಅಥವಾ ವೆಬ್‌ಸೈಟ್ ಮೂಲಕ ಸುಲಭವಾಗಿ ಬದಲಿಸಬಹುದು.
- ಆಫ್‌ಲೈನ್ ಮೂಲಕ: ರೈಲ್ವೆ ರಿಸರ್ವೇಶನ್ ಕೌಂಟರ್‌ಗಳ ಮೂಲಕವೂ ಈ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.
- ಸಮಯ: ರೈಲು ಹೊರಡುವ 30 ನಿಮಿಷಗಳ ಮೊದಲು, ಅಂದರೆ ಎರಡನೇ ರಿಸರ್ವೇಶನ್ ಚಾರ್ಟ್ ಸಿದ್ಧವಾಗುವ ಮುನ್ನ ಈ ಬದಲಾವಣೆ ಮಾಡಬೇಕು.
ಗಮನಿಸಬೇಕಾದ ಪ್ರಮುಖ ಅಂಶಗಳು ಮತ್ತು ನಿಬಂಧನೆಗಳು:
ಟಿಕೆಟ್ ಸ್ಥಿತಿ: ಈ ಸೌಲಭ್ಯವು ಕೇವಲ ‘ಕನ್ಫರ್ಮ್’ (Confirmed) ಮತ್ತು ‘ಆರ್‌ಎಸಿ’ (RAC) ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ಗಳಿಗೆ ಈ ಅವಕಾಶವಿಲ್ಲ.ಒಬ್ಬ ಪ್ರಯಾಣಿಕ ತನ್ನ ಬೋರ್ಡಿಂಗ್ ಸ್ಟೇಷನ್ ಅನ್ನು ಕೇವಲ ಒಂದು ಬಾರಿ ಮಾತ್ರ ಬದಲಾಯಿಸಲು ಸಾಧ್ಯವಿರುತ್ತದೆ.
ಸಮಯ ಮಿತಿ : ಎರಡನೇ ಚಾರ್ಟ್ ಸಿದ್ಧವಾಗುವ ಮುನ್ನವೇ ಬದಲಾವಣೆ ಮಾಡಿಕೊಳ್ಳಬೇಕು. ನೀವು ಬದಲಾವಣೆ ಮಾಡಿದ ತಕ್ಷಣ ನಿಮ್ಮ ಮೊಬೈಲ್‌ಗೆ ದೃಢೀಕರಣದ ಸಂದೇಶ (Alert Message) ಬರುತ್ತದೆ. ದಕ್ಷಿಣ ಮಧ್ಯ ರೈಲ್ವೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ಲಕ್ಷಾಂತರ ಪ್ರಯಾಣಿಕರಿಗೆ ನೆರವಾಗಲಿದೆ.

