ಹಾವೇರಿ : ಹಾವೇರಿಯಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಎಸ್ಕಾರ್ಟ್ ವಾಹನವು KSRTC ಬಸ್’ಗೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೇ ಪಿ.ಬಿ. ರಸ್ತೆಯಲ್ಲಿ ನಡೆದ ಈ ಅಪಘಾತದಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಅತಿ ವೇಗವೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ವಿಧಾನಸಭೆಯ ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಕಾರ್ಟ್ ವಾಹನವು ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದ ಘಟನೆ ಹಾವೇರಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎಸ್ಕಾರ್ಟ್ ವಾಹನದ ಚಾಲಕನ ವಿರುದ್ಧ ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 2ರಂದು ಹಳೇ ಪಿ.ಬಿ. ರಸ್ತೆಯ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆಗೆ ಹೋಗುವ ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವಾಕರಸಾಸಂ ಬಸ್ಗೆ (ಕೆಎ 27 ಎಫ್ 0726) ಎಸ್ಕಾರ್ಟ್ ವಾಹನವು ಹಿಂಬದಿಯಿಂದ ಬಂದು ಜೋರಾಗಿ ಗುದ್ದಿದೆ.ಅಪಘಾತದ ತೀವ್ರತೆಗೆ ಬಸ್ನ ಹಿಂಭಾಗ ಮತ್ತು ಎಸ್ಕಾರ್ಟ್ ವಾಹನದ ಮುಂಭಾಗ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಎಸ್ಕಾರ್ಟ್ ವಾಹನದ ಚಾಲಕ, ಪೊಲೀಸ್ ಸಿಬ್ಬಂದಿ ಚನ್ನಬಸಪ್ಪ ಅರ್ಚಕ ವಿರುದ್ಧ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.

