ಬೆಂಗಳೂರು : ಸಿಲಿಕಾನ್ ಸಿಟಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳ ಮಾಯಾಜಾಲಕ್ಕೆ ಬಿದ್ದು ಬರೋಬ್ಬರಿ 18.25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮದುವೆಯಾಗುವ ಆಮಿಷವೊಡ್ಡಿ, ನಂತರ ಕ್ರಿಪ್ಟೋ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಆಕೆ ಈ ಕೃತ್ಯ ಎಸಗಿದ್ದಾಳೆ. ಹಣ ವರ್ಗಾವಣೆಯಾದ ಬೆನ್ನಲ್ಲೇ ಆಕೆ ನಾಪತ್ತೆಯಾಗಿದ್ದು, ಸಂತ್ರಸ್ತ ಟೆಕ್ಕಿ ಈಗ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಹೌದು. ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಮದುವೆ ಮತ್ತು ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಬರೋಬ್ಬರಿ 18 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗೆ ಡೇಟಿಂಗ್ ಆ್ಯಪ್ ಮೂಲಕ ಯುವತಿಯೊಬ್ಬಳ ಪರಿಚಯವಾಗಿತ್ತು. ಈಕೆ ತಾನು ಹೂಡಿಕೆ ತಜ್ಞೆ ಎಂದು ನಂಬಿಸಿದ್ದಳು.ಮೊದಲು ಮದುವೆಯಾಗುವ ಭರವಸೆ ನೀಡಿದ ಯುವತಿ, ನಂತರ ಕ್ರಿಪ್ಟೋಕರೆನ್ಸಿ ಮತ್ತು ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದ್ದಳು.ಆಕೆಯ ಮಾತನ್ನು ನಂಬಿದ ಎಂಜಿನಿಯರ್, ಆಕೆ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 18.25 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು.
ವಂಚನೆ ಬೆಳಕಿಗೆ ಬಂದಿದ್ದು : ಹಣ ವರ್ಗಾವಣೆಯಾದ ನಂತರ ಲಾಭದ ಹಣವನ್ನಾಗಲಿ ಅಥವಾ ಅಸಲು ಹಣವನ್ನಾಗಲಿ ವಾಪಸ್ ನೀಡದೆ ಯುವತಿ ಸಬೂಬು ಹೇಳತೊಡಗಿದ್ದಾಳೆ. ಸಂಶಯಗೊಂಡ ಎಂಜಿನಿಯರ್ ಹಣ ವಾಪಸ್ ಕೇಳಿದಾಗ ಆಕೆ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ.
ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಸಂತ್ರಸ್ತ ಎಂಜಿನಿಯರ್ ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಡೇಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರು ನೀಡುವ ಹೂಡಿಕೆ ಸಲಹೆಗಳು ಅಥವಾ ಹಣದ ಬೇಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೈಬರ್ ಪೊಲೀಸರು ಈ ಮೂಲಕ ಮನವಿ ಮಾಡಿದ್ದಾರೆ.

