HomeKarnatakaBIG NEWS: ದಾವಣಗೆರೆ ಉಪಚುನಾವಣೆ: 12 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

BIG NEWS: ದಾವಣಗೆರೆ ಉಪಚುನಾವಣೆ: 12 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎರಡು ಕ್ಷೇತ್ರಗಳ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ವಿಪಕ್ಷ ನಾಯಕ ಆರ್.ಅಶೋಕ್ 12 ಅಂಶಗಳಿರುವ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್:
ನಮ್ಮ ದೃಷ್ಟಿ (ನಮ್ಮ ಮಿಷನ್) : ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು. ಸುಧಾರಿತ ಮೂಲಸೌಕರ್ಯ, ಉದ್ಯೋಗಾವಕಾಶಗಳು ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ಕಲ್ಪಿಸುವುದು ನಮ್ಮಗುರಿ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕಾಪಾಡುವುದು ನಮ್ಮ ಧ್ಯೇಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ : ಎಲ್ಲ ಪ್ರಮುಖ ರಸ್ತೆಗಳ ಪುನರ್ ನಿರ್ಮಾಣ ಮತ್ತು ಗುಂಡಿ ಮುಕ್ತ ರಸ್ತೆ ಯೋಜನೆ. ಒಳ ರಸ್ತೆಗಳ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆ. ಕ್ಷೇತ್ರದಲ್ಲಿರುವ 39 ಸ್ಲಂ ಪ್ರದೇಶಗಳ ಅಭಿವೃದ್ಧಿ. ಮಾದರಿ ಉದ್ಯಾನಗಳನ್ನು ನಿರ್ಮಿಸಲು ಆದ್ಯತೆ. ಗ್ರಾಮ ಮತ್ತು ನಗರ ಪ್ರದೇಶಗಳ ಸಮತೋಲನ ಅಭಿವೃದ್ಧಿಗೆ ಕ್ರಮ.

ಆರೋಗ್ಯ ಸೇವೆಗಳು: ಸರ್ಕಾರಿ ಆಸ್ಪತ್ರೆಗಳನ್ನು ಆಧುನಿಕತೆಯೊಂದಿಗೆ ಮೇಲ್ದರ್ಜೆಗೇರಿಸುವುದು, ಉಚಿತ ಸಂಚಾರಿ ಕ್ಲಿನಿಕ್, ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಆರೋಗ್ಯ ಸೇವೆ. ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುಧಾರಿಸಿ ನಾಗರಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು.

ಶಿಕ್ಷಣ ಮತ್ತು ಯುವಜನತೆ : ಸರ್ಕಾರಿ ಶಾಲಾ – ಕಾಲೇಜುಗಳ ಅಭಿವೃದ್ಧಿ ಹಾಗೂ ‘ಸ್ಮಾರ್ಟ್ ಕ್ಲಾಸ್’ಗೆ ರೂಪಾಂತರ. ಯುವ ಜನರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಆಟದ ಮೈದಾನ, ಗರಡಿ ಮನೆ, ವ್ಯಾಯಾಮ ಶಾಲೆಗಳ ಅಭಿವೃದ್ಧಿ.

ಉದ್ಯೋಗ ಮತ್ತು ಕೈಗಾರಿಕೆ : ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಉತ್ತೇಜನ. ಉದ್ಯೋಗ ಅವಕಾಶಕ್ಕಾಗಿ ಕೌಶಲ್ಯಾಭಿವೃದ್ಧಿಗೆ ಉತ್ತೇಜನ. ಸ್ವಯಂ ಉದ್ಯೋಗ ಯೋಜನೆಗಳಿಗೆ ಹಾಗೂ ಸ್ಟಾರ್ಟಪ್‌ಗಳ ಆರಂಭಕ್ಕೆ ಆದ್ಯತೆ.

ಸ್ವಚ್ಛತೆ ಮತ್ತು ನಗರ ನಿರ್ವಹಣೆ : ನಗರದಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನಕ್ಕೆ ಆದ್ಯತೆ. ಮನೆಮನೆಗೆ ಕಸ ಸಂಗ್ರಹಣೆ ಚುರುಕುಗೊಳಿಸುವಿಕೆ ಮತ್ತು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ.

ಮಹಿಳಾ ಮತ್ತು ಸಮಾಜ ಕಲ್ಯಾಣ : ಮಹಿಳಾ ಸುರಕ್ಷತೆಗಾಗಿ ವಿಶೇಷ ಕ್ರಮಗಳು. ಸ್ವಸಹಾಯ ಸಂಘಗಳ ಬೆಳವಣಿಗೆಗೆ ಬೆಂಬಲ. ಹಿರಿಯ ನಾಗರಿಕರ ಕುಂದು ಕೊರತೆಗಳ ನಿವಾರಣೆಗೆ ಆದ್ಯತೆ.

ರೈತ ಹಿತಾಸಕ್ತಿ : ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೀಡಾದಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಸಿ, ರೈತರ ಹಿತಾಸಕ್ತಿಯನ್ನು ಕಾಪಾಡಲಾಗುವುದು. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಬಳಲಿದಾಗ ಬೆಳೆವಿಮೆ ಮತ್ತು ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು.

ಸಾರಿಗೆ ಮತ್ತು ಸಂಪರ್ಕ : ಸುಗಮ ವಾಹನ ಸಂಚಾರಕ್ಕಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಆದ್ಯತೆ. ಉತ್ತಮ ಸಾರ್ವಜನಿಕ ನಗರ ಸಾರಿಗೆ ವ್ಯವಸ್ಥೆಗೆ ಆದ್ಯತೆ.

ಪಾರದರ್ಶಕ ಆಡಳಿತ : ಶಾಸಕರಾಗಿ ಆಯ್ಕೆಯಾದ ಒಂದು ತಿಂಗಳೊಳಗೆ “ಜನಸಂಪರ್ಕ ಕಚೇರಿ” ಉದ್ಘಾಟನೆ. ಭ್ರಷ್ಟಾಚಾರ ರಹಿತ ಆಡಳಿತ ಮತ್ತು ನಾಗರೀಕರ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಆದ್ಯತೆ. ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ.

ಕುಡಿಯುವ ನೀರು ಮತ್ತು ಒಳಚರಂಡಿ : 24×7 ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಆದ್ಯತೆ. ಒಳಚರಂಡಿ ವ್ಯವಸ್ಥೆಯ ಸುಧಾರಣೆ – ನಿರ್ಮಾಣ ಮತ್ತು ಮಳೆನೀರು ಸಂಗ್ರಹಣೆ ಯೋಜನೆಗೆ ಉತ್ತೇಜನ.

ವಿದ್ಯುತ್ ಮತ್ತು ಮೂಲಸೌಕರ್ಯ : ಸೌರ ಶಕ್ತಿ ವಿದ್ಯುತ್ ಉತ್ಪಾದನೆಗೆ ಆದ್ಯತೆ. ಸೌರಶಕ್ತಿ ಆಧಾರಿತ ಬೀದಿ ದೀಪಗಳ ಸಂಪೂರ್ಣ ಆಧುನೀಕರಣ (LED).

ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಆರ್. ಅಶೋಕ್ ಮಾತನಾಡಿ, ‘ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಮಾದರಿ ದಾವಣಗೆರೆ ದಕ್ಷಿಣ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಡೀ ದಾವಣಗೆರೆ ಜನತೆ ಒಂದು ಬದಲಾವಣೆ ಆಗುತ್ತೆ, ಆ ಕುಟುಂಬ ಬಿಟ್ಟು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತದೆ ಎಂದುಕೊಂಡಿದ್ದರು. ಅಹಿಂದ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ, ಮುಸ್ಲಿಮರನ್ನು ಹತ್ತಿರಕ್ಕೆ ಕರೆದುಕೊಂಡಿಲ್ಲ. ಈಗ ಈ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಿಮ್ಮ ನಿಮ್ಮ ಮಕ್ಕಳ ಕಾಲಕ್ಕೂ ಕೂಡ ನೀವು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದರೆ ನಿಮಗೆ ಮುಂದೆ ಭವಿಷ್ಯ ಇದೆ.‌ ಎಸ್. ಎಸ್.​ ಮಲ್ಲಿಕಾರ್ಜುನ್ ಅಧಿವೇಶಕ್ಕೆ ಬರೋದಿಲ್ಲ, ಕ್ಷೇತ್ರದಲ್ಲಿ ಸಿಗೋದಿಲ್ಲ. ಒಂದೇ ಮನೆಯಲ್ಲಿ ಅಧಿಕಾರ ಇದ್ದರೆ ದೌರ್ಜನ್ಯ, ದರ್ಪ ಇರುತ್ತೆ. ಈ ಸರ್ವಾಧಿಕಾರವನ್ನು ಧಿಕ್ಕರಿಸಿ ಬಿಜೆಪಿಯ ದಲಿತ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular