HomeFeatured Newsನಂಜನಗೂಡು ಪಂಚ ರಥೋತ್ಸವ: ಊರ ಜಾತ್ರೆ ನೆನಪು ಮಾಡಿಕೊಂಡ ಸಚಿವರು

ನಂಜನಗೂಡು ಪಂಚ ರಥೋತ್ಸವ: ಊರ ಜಾತ್ರೆ ನೆನಪು ಮಾಡಿಕೊಂಡ ಸಚಿವರು

ಮೈಸೂರಿನ ನಂಜನಗೂಡು ಪಂಚ ರಥೋತ್ಸವ ಅದ್ದೂರಿಯಾಗಿ ನಡೆದಿದೆ. ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಚಿವರು ‘ಊರ ಜಾತ್ರೆ ಒಂದು ನೆನಪು’ ಎಂದು ನಂಜನಗೂಡು ಪಂಚ ರಥೋತ್ಸವದ ನೆನಪು ಮಾಡಿಕೊಂಡಿದ್ದಾರೆ.

ಸಚಿವರ ಫೇಸ್‌ಬುಕ್‌ ಪೋಸ್ಟ್: ನಂಜನಗೂಡಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವ ನಮ್ಮೂರು ಹದಿನಾರು. ಇದರ ಜೊತೆಗೆ ಕಪಿಲಾ ನದಿ ದಡದ ಪಕ್ಕದಲ್ಲೇ ಇರುವ ಹೆಜ್ಜಿಗೆ ಕೂಡಾ ನಮ್ಮ ಸಂಬಂಧಿಗಳ ಊರಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕ ವಯಸ್ಸಿನಲ್ಲಿ ಹೆಜ್ಜಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ನಂಜನಗೂಡು ಜಾತ್ರೆಗೆ ಬಹು ಸಂಭ್ರಮದಿಂದ ಹೋಗುತ್ತಿದ್ದೆವು.  ಬಡತನ ಹೆಚ್ಚಾಗಿದ್ದ ಆ ಕಾಲದಲ್ಲಿ ಉಡುವ ಬಟ್ಟೆಗಳೂ ಸಹ ಕಡಿಮೆ ಇದ್ದದ್ದರಿಂದ ಅಮ್ಮ ಹೊಲಿಸಿಕೊಟ್ಟ ಅಪರೂಪದ ಪ್ಯಾಂಟು ಶರ್ಟನ್ನೇ ಜೋಪಾನವಾಗಿ ಇಟ್ಟುಕೊಂಡು ಜಾತ್ರೆಗೆ ಹೋಗುತ್ತಿದ್ದ ನೆನಪು.

ಆದರೆ ಈಗಿನಂತೆ ಆಗ ನದಿಯನ್ನು ದಾಟಲು ಸೇತುವೆ ಇಲ್ಲದ ಕಾರಣ, ನಾವು ನದಿಯನ್ನೇ ದಾಟಬೇಕಾಗುತ್ತಿತ್ತು. ಬೇಸಿಗೆ ಸಂದರ್ಭದಲ್ಲಿ ನೀರು ಕಡಿಮೆ ಇರುತ್ತಿದ್ದ ಕಾರಣ, ನಾವು ಹೊಸ ಪ್ಯಾಂಟು ಯಾವ ಕಾರಣಕ್ಕೂ ನೆನೆಯಬಾರದು ಎಂದು ಹೆಚ್ಚು ಕಡಿಮೆ ಮೊಣಕಾಲಿಗಿಂತಲೂ ಮೇಲಿನವರೆಗೂ ಅದನ್ನು ಮಡಿಚಿಕೊಂಡು, ನದಿ ದಾಟುತ್ತಿದ್ದೆವು. ಕೆಲವೊಮ್ಮೆ ನೀರು ಸ್ವಲ್ಪ ಹೆಚ್ಚಾಗಿದೆ ಎನಿಸಿದಾಗ ಪ್ಯಾಂಟನ್ನು ತಲೆ ಮೇಲೆ ಹೊತ್ತು ಆ ಕಡೆ ದಡಕ್ಕೆ ಹೋದ ಮೇಲೆ ಹಾಕಿಕೊಳ್ಳುತ್ತಿದ್ದೆವು.

ಇನ್ನು ಆಗ ನಮ್ಮ ಕೈಲಿ ಇರುತ್ತಿದ್ದ 2-3 ರೂಪಾಯಿಯಲ್ಲಿ ಜಾತ್ರೆಯಲ್ಲಿ ಬೆಂಡು ಬತ್ತಾಸು ಮತ್ತು ಕಳ್ಳೆಪುರಿಯನ್ನು ಕೊಂಡು ಅಲ್ಲೇ ಸ್ವಲ್ಪ ತಿಂದು ಮಿಕ್ಕಿದ್ದನ್ನು ಸ್ವಲ್ಪವೂ ನೆನೆಯದ ಹಾಗೆ ನದಿ ದಾಟಿಕೊಂಡು ಮನೆಗೆ ಒಯ್ಯುತ್ತಿದ್ದ ನೆನಪು ಈಗಲೂ ಮಾಸಿಲ್ಲ.

ನಮ್ಮೂರು ನಂಜನಗೂಡಿನ ಜಾತ್ರೆ ಇಡೀ ಮೈಸೂರು ಚಾಮರಾಜನಗರ ಭಾಗಕ್ಕೆ ಬಹಳ ಜನಪ್ರಿಯವಾದ ಜಾತ್ರೆ. ಇಂತಹ ಜಾತ್ರೆಯಲ್ಲಿ ಈ ದಿನ ಪಾಲ್ಗೊಂಡಾಗ ನನ್ನೊಳಗೆ ಬಾಲ್ಯದ ನೆನಪುಗಳು ಮತ್ತೆ ಆವರಿಸಿದವು.

ಬಹು ಮುಖ್ಯವಾಗಿ ನಾನು ಸಚಿವನಾದ ನಂತರದಲ್ಲಿ ಇಲ್ಲಿನ ಜನರು ಸುಲಭವಾಗಿ ನದಿ ದಾಟಲು ಅನುಕೂಲ ಅಗುವ ರೀತಿಯಲ್ಲಿ ನಂಜನಗೂಡು – ಹೆಜ್ಜಿಗೆ ಸೇತುವೆ ಮತ್ತು ನದಿಯ ಇಕ್ಕೆಲಗಳಲ್ಲಿ ಸುಸಜ್ಜಿತ ಮೆಟ್ಟಿಲುಗಳು, ಹಾಗೂ ಪರಶುರಾಮ ದೇವಾಲಯದ ಸುತ್ತ ಮಳೆ ಮತ್ತು ನದಿ ಪ್ರವಾಹದಿಂದ ಆಗುತ್ತಿದ್ದ ಕೆಸರನ್ನು ತಪ್ಪಿಸಲು ಸುತ್ತ ಕಾಂಕ್ರೀಟ್ ಹೊದಿಕೆ ನಿರ್ಮಾಣ ಹಾಗೂ ನಂಜನಗೂಡಿನ ದೇವಾಯದ ಸುತ್ತಲೂ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾಂಕ್ರೀಟ್ ಹಾಸಿನ ವ್ಯವಸ್ಥೆಯನ್ನು ಮಾಡಿಸುವ ಅವಕಾಶ ನನ್ನದಾಗಿತ್ತು.

ಬಾಲ್ಯದ ನೆನಪುಗಳನ್ನು ಹಾಗೆ ಕಾಪಾಡಿಕೊಂಡು ಅವಕಾಶ ಸಿಕ್ಕಾಗ ಅವುಗಳನ್ನು ಸಾಕಾರಗೊಳಿಸುವ ಸಂದರ್ಭ ಇದೆಯಲ್ಲಾ ಅದಕ್ಕೆ ಎಂದೂ ಬೆಲೆ ಕಟ್ಟಲು ಆಗದು.

ಅದರಲ್ಲೂ ಜಾತಿ ಧರ್ಮ ಬೇಧವಿಲ್ಲದೇ ಒಂದು ಮುಗ್ದ ಆಚರಣೆಯಾಗಿ ಆಚರಿಸಲ್ಪಡುವ ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಸಹ ಹಾಗೆ ತನ್ನ ಆಚರಣೆಯ ಮುಗ್ದತೆಯನ್ನು ಉಳಿಸಿಕೊಂಡಿದೆ.

ಊರ ಜಾತ್ರೆಗೆ ಈ ದಿನ ಹೋದ ಕಾರಣ ಮನಸ್ಸಿನಲ್ಲಿ ಇದ್ದ ನೆನಪನ್ನು ಒಮ್ಮೆ ಹೇಳಿಕೊಳ್ಳಬೇಕು ಎನಿಸಿತು ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular