ಬೆಂಗಳೂರು: ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಥಾಯ್ಲೆಂಡ್ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ(FRRO) ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿಗೆ ನಿರ್ದೇಶನ ನೀಡುವಂತೆ ಕೋರಿ ಥಾಯ್ಲೆಂಡ್ ಮೂಲದ ಜಿರಾಟ್ ಜಾಯಾ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಮಹಿಳೆ ವೇಶ್ಯಾವಾಟಿಕೆ ದಂಧೆಯ ಸಂತ್ರಂಸ್ತೆಯಾಗಿದ್ದಾರೆ. ಆಕೆ ಇನ್ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಬೇಡವಾಗಿದ್ದರೆ ಥಾಯ್ಲೆಂಡ್ ಗೆ ವಾಪಸ್ ಕಳುಹಿಸಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಬೆಂಗಳೂರಿನ ಟ್ರಿನಿಟಿ ಥಾಯ್ ಸ್ಪಾ ವೆಲ್ ನೆಸ್ ಸೆಂಟರ್ ಮೇಲೆ ರಾಮಮೂರ್ತಿ ನಗರ ಠಾಣೆ ಪೋಲೀಸರು 2026 ರ ಫೆಬ್ರವರಿ 3ರಂದು ದಾಳಿ ನಡೆಸಿದ್ದರು. ದಾಳಿಯ ವೇಳೆ ಆಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ಕೆಲವರನ್ನು ಬಂಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬಂಧಿತ ಸಂತ್ರಸ್ತ ಮಹಿಳೆ ಜಿರಾಟ್ ಜಾಯಾಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ವಶಕ್ಕೆ ನೀಡಿದ್ದರು. ವೀಸಾ ಅವಧಿ ಮುಗಿದ ಕಾರಣ ಆಕೆಯನ್ನು ತುಮಕೂರಿನ ದಿಬ್ಬೂರು ಕಾಲೋನಿಯ ಮಹಿಳಾ ವಿದೇಶಿಯರ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಈ ನಡುವೆ ಅರ್ಜಿದಾರ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯನ್ನು ತಾಯ್ನಾಡಿಗೆ ವಾಪಸ್ ಕಳಿಸಲು ನಿರ್ದೇಶಿಸಿದೆ.

