ಐಪಿಎಲ್ 2026 ಸೀಸನ್‌ನ ಮೊದಲ ಪಂದ್ಯದಲ್ಲೇ ಅಂಪೈರಿಂಗ್ ನಿರ್ಧಾರಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಹಣಾಹಣಿಯಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧಕ್ಕೆ ಕಾರಣವಾಗಿದೆ. ಬೌಂಡರಿ ಲೈನ್ ಬಳಿ ಅವರು ಚೆಂಡನ್ನು ಹಿಡಿದ ರೀತಿಗೆ ಸನ್‌ರೈಸರ್ಸ್ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ವಿವಾದ?
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಮಾರಿಯೋ ಶೆಫರ್ಡ್ ಎಸೆದ ಚೆಂಡನ್ನು ಹೆನ್ರಿಚ್ ಕ್ಲಾಸೆನ್ ಲೆಗ್ ಸೈಡ್‌ಗೆ ಬಾರಿಸಿದರು. ಡೀಪ್ ಮಿಡ್ ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫಿಲ್ ಸಾಲ್ಟ್ ಓಡಿ ಬಂದು ಅದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ, ಕ್ಯಾಚ್ ಪೂರ್ಣಗೊಳಿಸುವ ಭರದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪಲ್ಟಿ ಹೊಡೆದರು. ಆ ಸಮಯದಲ್ಲಿ ಸಾಲ್ಟ್ ಅವರ ಕಾಲು ಅಥವಾ ದೇಹ ಬೌಂಡರಿ ಗೆರೆಗೆ ತಗುಲಿದೆ ಎಂದು ಸನ್‌ರೈಸರ್ಸ್ ತಂಡ ಭಾವಿಸಿತ್ತು. ಮೈದಾನದಲ್ಲಿದ್ದ ಅಂಪೈರ್‌ಗಳು ಇದನ್ನು ಥರ್ಡ್ ಅಂಪೈರ್‌ಗೆ ವರ್ಗಾಯಿಸಿದರು. ದೀರ್ಘಕಾಲ ಪರಿಶೀಲಿಸಿದ ಥರ್ಡ್ ಅಂಪೈರ್, ಫೀಲ್ಡಿಂಗ್ ತಂಡದ (RCB) ಪರವಾಗಿ ತೀರ್ಪು ನೀಡಿದರು. ಇದು ಈಗ ದೊಡ್ಡ ವಿವಾದಕ್ಕೆ ದಾರಿಯಾಗಿದೆ.
ಸನ್‌ರೈಸರ್ಸ್ ಇನ್ನಿಂಗ್ಸ್ ಹೈಲೈಟ್ಸ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಪವರ್‌ಪ್ಲೇನಲ್ಲಿ ಮೂವರು ಪ್ರಮುಖ ಆಟಗಾರರನ್ನು ಕಳೆದುಕೊಂಡರೂ, ನಾಯಕ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 38 ಎಸೆತಗಳಲ್ಲಿ 8 ಫೋರ್ ಹಾಗೂ 5 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅವರಿಗೆ ಕ್ಲಾಸೆನ್ (31) ಉತ್ತಮ ಸಾಥ್ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟವಾಡಿದರು. ಕಿಶನ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಬೌಲಿಂಗ್‌ನಲ್ಲಿ ಜಾಕೋಬ್ ಡಫಿ ಮ್ಯಾಜಿಕ್
ಆರ್‌ಸಿಬಿ ಪರ ಐಪಿಎಲ್ ಪದಾರ್ಪಣೆ ಮಾಡಿದ ಜಾಕೋಬ್ ಡಫಿ ಮೊದಲ ಪಂದ್ಯದಲ್ಲೇ ಮುದ್ರೆ ಒತ್ತಿದ್ದಾರೆ. 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರು. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ರೋಮಾರಿಯೋ ಶೆಫರ್ಡ್ ಕೂಡ 3 ವಿಕೆಟ್ ಪಡೆದರಾದರೂ ಸ್ವಲ್ಪ ದುಬಾರಿಯಾದರು.
ಕೊನೆಯಲ್ಲಿ ಅನಿ ಕೇತ್ ವರ್ಮಾ ಅಬ್ಬರ:
ಸತತವಾಗಿ ವಿಕೆಟ್ ಬೀಳುತ್ತಿದ್ದಾಗ ಅನಿ ಕೇತ್ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 18 ಎಸೆತಗಳಲ್ಲಿ 3 ಫೋರ್ ಮತ್ತು 4 ಸಿಕ್ಸರ್ ಸಿಡಿಸಿ 43 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಇದರಿಂದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿತು. ಫಿಲ್ ಸಾಲ್ಟ್ ಈ ಪಂದ್ಯದಲ್ಲಿ ಒಟ್ಟು ಮೂರು ಕ್ಯಾಚ್‌ಗಳನ್ನು ಹಿಡಿದರು, ಅದರಲ್ಲಿ ಇಶಾನ್ ಕಿಶನ್ ಅವರ ಕ್ಯಾಚ್ ಪಂದ್ಯದ ಹೈಲೈಟ್ ಆಗಿತ್ತು.
ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ
“ಅಂಪೈರ್ ಕುರುಡರಾಗಿದ್ದಾರೆ”, “ಮೈದಾನದಲ್ಲಿ 50ಕ್ಕೂ ಹೆಚ್ಚು ಕ್ಯಾಮೆರಾಗಳಿದ್ದರೂ ಕೇವಲ ಒಂದು ಆಂಗಲ್ ಏಕೆ ತೋರಿಸಲಾಯಿತು?” ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅತಿ ಹೆಚ್ಚು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಇಂತಹ ನಿರ್ಧಾರಗಳು ಕ್ರೀಡೆಯ ಮರ್ಯಾದೆಯನ್ನು ಪ್ರಶ್ನಿಸುವಂತೆ ಮಾಡಿವೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

