ಬೆಂಗಳೂರು: ಬೆಂಗಳೂರಿನ ಎಂ. ಚನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಐಪಿಎಲ್ ಪಂದ್ಯ ನೋಡಲು ಬಂದ 15ಕ್ಕೂ ಹೆಚ್ಚು ಮಂದಿಯ ಮೊಬೈಲ್ ಕಳವು ಮಾಡಲಾಗಿದೆ.
ಪಂದ್ಯ ಮುಗಿದ ನಂತರ ಹೊರಗೆ ಬರುವಾಗ ಜನಸಂದಣಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮೊಬೈಲ್ ಕಳವು ಮಾಡಿದ್ದಾರೆ. ಜತೆಗೆ ಪಿಕ್ ಪಾಕೆಟ್ ಮಾಡಿ ಹಣ ಎಗರಿಸಿದ್ದಾರೆ. 15ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿದ್ದು, ಮೊಬೈಲ್ ಕಳೆದುಕೊಂಡವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮತ್ತೆ ಕೆಲವರು ಆನ್ಲೈನ್ ನಲ್ಲಿ ದೂರು ಸಲ್ಲಿಸಿದ್ದಾರೆ.
ಗೇಟ್ ನಂಬರ್ 3ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಕಳ್ಳತನವಾಗಿರುವ ಶಂಕೆಯಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

