ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಪ್ರಾಕ್ಟೀಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ನು ಮುಂದೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿಗಳಿಗೆ (OPD) ಮಾತ್ರ ಸಲಹೆ ನೀಡಬಹುದು, ಒಳರೋಗಿ ದಾಖಲಾತಿ ಅಥವಾ ಚಿಕಿತ್ಸೆ ನಡೆಸುವಂತಿಲ್ಲ.
ಹೌದು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಖಾಸಗಿ ಪ್ರಾಕ್ಟೀಸ್‌ಗೆ ರಾಜ್ಯ ಸರ್ಕಾರ ಹೊಸ ಲಗಾಮು ಹಾಕಿದೆ. ಇನ್ಮುಂದೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿಗಳಿಗೆ (OPD) ಮಾತ್ರ ಸಲಹೆ ನೀಡಲು ಅವಕಾಶವಿದ್ದು, ಒಳರೋಗಿಗಳನ್ನು (In-patients) ದಾಖಲಿಸಿಕೊಂಡು ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆರೋಗ್ಯ ಇಲಾಖೆ ‘ಖಡಕ್’ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸುವ ವೈದ್ಯರು ಮತ್ತು ಮಾಹಿತಿ ಮುಚ್ಚಿಡುವ ಖಾಸಗಿ ಆಸ್ಪತ್ರೆಗಳಿಗೆ ₹50,000 ದಂಡದ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಹಿತದೃಷ್ಟಿಯಿಂದ, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ಆದೇಶ ಉಲ್ಲಂಘಿಸುವ ವೈದ್ಯರ ವಿರುದ್ಧ ಕೆಪಿಎಂಇ ಕಾಯ್ದೆ ಮಾತ್ರವಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ಅಡಿಯಲ್ಲಿಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಮಾಹಿತಿ ಬಹಿರಂಗ ಕಡ್ಡಾಯ: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಪೂರ್ಣ ವಿವರವನ್ನು ಜಿಲ್ಲಾ ಕೆಪಿಎಂಇ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಮತ್ತು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
ದಂಡದ ಬಿಸಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮಾಹಿತಿ ಮುಚ್ಚಿಟ್ಟ 8 ವೈದ್ಯರು ಹಾಗೂ 8 ಖಾಸಗಿ ಆಸ್ಪತ್ರೆಗಳಿಗೆ ತಲಾ 50,000 ರೂ. ದಂಡ ವಿಧಿಸಿ ಸರ್ಕಾರ ಬಿಸಿ ಮುಟ್ಟಿಸಿದೆ.
ಶಿಸ್ತು ಕ್ರಮ: ಈ ಆದೇಶ ಉಲ್ಲಂಘಿಸುವ ವೈದ್ಯರ ವಿರುದ್ಧ ಕೆಪಿಎಂಇ ಕಾಯ್ದೆ ಮಾತ್ರವಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ಅಡಿಯಲ್ಲಿಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.



