ಗ್ರಾಮೀಣ ಭಾಗದ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ಮತ್ತಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನಗರ ಪ್ರದೇಶದ ಸಿಬಿಲ್ (CIBIL) ಮಾದರಿಯಲ್ಲೇ, ಗ್ರಾಮೀಣ ಜನರ ಆರ್ಥಿಕ ಶಕ್ತಿಯನ್ನು ಅಳೆಯಲು ‘ಗ್ರಾಮೀಣ ಕ್ರೆಡಿಟ್ ಸ್ಕೋರ್’ (GCS) ಜಾರಿಗೆ ತರಲು ಬ್ಯಾಂಕುಗಳಿಗೆ ಆದೇಶ ನೀಡಲಾಗಿದೆ. ಇದರಿಂದ ಕ್ರೆಡಿಟ್ ಹಿಸ್ಟರಿ ಇಲ್ಲದವರಿಗೂ ಇನ್ಮುಂದೆ ಅತೀ ವೇಗವಾಗಿ ಬ್ಯಾಂಕ್ ಸಾಲ ದೊರೆಯಲಿದೆ.”
ಹೌದು. ಗ್ರಾಮೀಣ ಭಾಗದ ಜನರಿಗೆ ಸಾಲ ಮಂಜೂರು ಮಾಡುವಾಗ ‘ಗ್ರಾಮೀಣ ಕ್ರೆಡಿಟ್ ಸ್ಕೋರ್’ ಅನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಬ್ಯಾಂಕುಗಳಿಗೆ ಆದೇಶಿಸಿದೆ. ಸಾಮಾನ್ಯ ಕ್ರೆಡಿಟ್ ಸ್ಕೋರ್ (CIBIL) ಬಗ್ಗೆ ಸರಿಯಾದ ಅರಿವಿಲ್ಲದ ಗ್ರಾಮೀಣ ಜನರಿಗೆ ತೊಂದರೆಯಾಗದಂತೆ, ಈ ಹೊಸ ವ್ಯವಸ್ಥೆಯ ಮೂಲಕ ವೇಗವಾಗಿ ಸಾಲ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಏನಿದು ಗ್ರಾಮೀಣ ಕ್ರೆಡಿಟ್ ಸ್ಕೋರ್ (GCS)
ಗ್ರಾಮೀಣ ಭಾಗದ ಜನರು, ವಿಶೇಷವಾಗಿ ರೈತರು ಮತ್ತು ಸ್ವಸಹಾಯ ಸಂಘಗಳ ಆರ್ಥಿಕ ಶಕ್ತಿಯನ್ನು ಅಳೆಯಲು ಈ ‘ಗ್ರಾಮೀಣ ಕ್ರೆಡಿಟ್ ಸ್ಕೋರ್’ ಅನ್ನು ಮಾನದಂಡವಾಗಿ ಬಳಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಸಿಬಿಲ್ (CIBIL) ಮಾದರಿಯಲ್ಲೇ, ಗ್ರಾಮೀಣ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈಸ್ಕೋರ್‌ನಲ್ಲಿ ಏನೇನಿರುತ್ತದೆ ?
- ಸಾಲಗಾರರ ಯುಟಿಲಿಟಿ ಬಿಲ್‌ಗಳ (ವಿದ್ಯುತ್ ಇತ್ಯಾದಿ) ಪಾವತಿ ವಿವರ.
- ಸರ್ಕಾರಿ ಯೋಜನೆಗಳ ಫಲಾನುಭವಿಗಳ ವಿವರಗಳು.
- ಕೃಷಿ ಸಾಲಗಳು ಮತ್ತು ಟ್ರ್ಯಾಕ್ಟರ್ ಸಾಲಗಳ ಮರುಪಾವತಿ ಇತಿಹಾಸ.
ಪ್ರಮುಖ ಪ್ರಯೋಜನಗಳು
- ವೇಗದ ಸಾಲ ಮಂಜೂರಾತಿ: ಈ ಹೊಸ ವಿಧಾನದಿಂದಾಗಿ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಅತೀ ಶೀಘ್ರವಾಗಿ ಸಾಲ ಸಿಗಲಿದೆ.
- ಹೊಸ ಸಾಲಗಾರರಿಗೆ ವರ: ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಅಥವಾ ಯಾವುದೇ ಕ್ರೆಡಿಟ್ ಇತಿಹಾಸ (Credit History) ಇಲ್ಲದವರಿಗೆ ಈ ವ್ಯವಸ್ಥೆಯು ವರದಾನವಾಗಲಿದೆ.
- ನಿಖರ ಅಂದಾಜು: ವಿದ್ಯುತ್ ಬಿಲ್ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಡೇಟಾವನ್ನು ಬಳಸುವುದರಿಂದ, ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ಬ್ಯಾಂಕುಗಳು ನಿಖರವಾಗಿ ಅಂದಾಜಿಸಬಹುದು.
ಬಜೆಟ್ 2026 ಮತ್ತುಗುರಿಗಳು
2025-26ರ ಆರ್ಥಿಕ ಬಜೆಟ್‌ನಲ್ಲಿ ಈ ಗ್ರಾಮೀಣ ಕ್ರೆಡಿಟ್ ಸ್ಕೋರ್ ಬಗ್ಗೆ ಪ್ರಸ್ತಾಪಿಸಲಾಗಿದೆ. ನಗರ ಮತ್ತು ಗ್ರಾಮೀಣ ಜನರ ಆರ್ಥಿಕ ಪ್ರೊಫೈಲ್‌ಗಳು ವಿಭಿನ್ನವಾಗಿರುವುದರಿಂದ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಈ ವಿಶೇಷ ಸ್ಕೋರ್ ರೂಪಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಪ್ರಸ್ತುತ, ಟ್ರಾನ್ಸ್ ಯೂನಿಯನ್ ಸಿಬಿಲ್ (TransUnion CIBIL) ನಂತಹ ಸಂಸ್ಥೆಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಆದ್ಯತಾ ವಲಯದ ಸಾಲಗಳ ಆಧಾರದ ಮೇಲೆ ಈ ಸ್ಕೋರ್ ಅನ್ನು ವಿಶ್ಲೇಷಿಸುತ್ತಿವೆ. ಇದರಿಂದ ಬ್ಯಾಂಕುಗಳು ಗ್ರಾಮೀಣ ಭಾಗದಲ್ಲಿ ಧೈರ್ಯವಾಗಿ ಸಾಲ ನೀಡಲು ಮತ್ತು ವಂಚನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

