ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಾದಿಕ್ ಪೈಲ್ವಾನ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣಕ್ಕೆ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಈಗ ಸಾದ್ಕ್ ಪೈಲ್ವಾನ್ ಅವರ ಮನವೊಲಿಕೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಸಾದಿಕ್ ಪೈಲ್ವಾನ್ ಅವರ ಕುಸ್ತಿ ನೋಡಲು ಹೋಗುತ್ತಿದ್ದೆ. ಸಾದಿಕ್ ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಕೇಳಿದ್ದರು. ಉಪ ಚುನಾವಣೆಗೆ ಅಭ್ಯರ್ಥಿಯಾಗಬೇಕೆಂದು ಬಯಸಿದ್ದರು. ಅದರಲ್ಲಿ ತಪ್ಪೇನಿಲ್ಲ. ದಾವನಗೆರೆ ದಕ್ಷಿಣದಲ್ಲಿ 70,000ಕ್ಕಿಂತಲೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ ಅವರು ಟಿಕೆಟ್ ಕೇಳಿದ್ದರು. ಆದರೆ ಶಾಸಕರು ನಿಧನರಾದರೆ ಕುಟುಂಬಕ್ಕೆ ಟಿಕೆಟ್ ನೀಡುವ ಪದ್ಧತಿ ಇದೆ ಎಂದರು.
ಕಾಂಗ್ರೆಸ್ ನಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಪದ್ಧತಿ ಇದೆ. ಹಾಗಾಗಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಸಾದಿಕ್ ಪೈಲ್ವಾನ್ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೀಗ ಸಾದಿಕ್ ಪೈಲ್ವಾನ್ ಅವರ ಮನವೊಲಿಕೆ ಮಾಡಲಾಗಿದೆ. ಸಾದಿಕ್ ಪೈಲ್ವಾನ್ ಇದೀಗ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ. ಸಾದಿಕ್ ಅವರಿಗೆ ನಾವು ಧನ್ಯವಾದ ತಿಳಿಸುತ್ತೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.

