ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಪಿ.ಎಂ. ಪೋಷಣ್ (ಮಧ್ಯಾಹ್ನ ಉಪಹಾರ ಯೋಜನೆ) ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಕುರಿತು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಿ.ಎಂ. ಪೋಷಣ್ (ಬಿಸಿಯೂಟ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಅಡುಗೆ ಸಿಬ್ಬಂದಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಸೂಚನೆ ನೀಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ಕ್ಕೆ ಇವರ ಸೇವೆಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲಾಗುವುದು. ಆದರೆ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಜೂನ್ 1 ರಿಂದಲೇ ಅನ್ವಯವಾಗುವಂತೆ ಇವರನ್ನು ಪುನಃ 10 ತಿಂಗಳ ಅವಧಿಗೆ ಮರುನೇಮಕ ಮಾಡಿಕೊಳ್ಳಲು ಇಲಾಖೆಯು ಆದೇಶಿಸಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಾರ್ಚ್ 31, 2026ಕ್ಕೆ ಅಡುಗೆ ಸಿಬ್ಬಂದಿಗಳನ್ನು ತಾತ್ಕಾಲಿಕ ಸೇವೆಯಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ.
ಮರು ನೇಮಕಾತಿ: ಮುಂದಿನ ಶೈಕ್ಷಣಿಕ ಸಾಲಿನಲ್ಲಿ (2026-27) ಜೂನ್ 1, 2026 ರಿಂದ ಜಾರಿಗೆ ಬರುವಂತೆ ಮುಂದಿನ 10 ತಿಂಗಳ ಅವಧಿಗೆ ಅಡುಗೆ ಸಿಬ್ಬಂದಿಗಳನ್ನು ಪುನಃ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಲಾಗಿದೆ.
ವಯೋಮಿತಿ: ಅಡುಗೆ ಸಿಬ್ಬಂದಿಗಳಿಗೆ 60 ವರ್ಷ ವಯೋಮಿತಿ ಮೀರಿದ ಸಂದರ್ಭದಲ್ಲಿ ಅವರ ಬದಲಿಗೆ ಹೊಸ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಮಾರ್ಗಸೂಚಿ ನೀಡಲಾಗಿದೆ.


