ಹೈದರಾಬಾದ್: ದೇಶಾದ್ಯಂತ ಅಡುಗೆ ಅನಿಲ (LPG) ಕೊರತೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಹೈದರಾಬಾದ್‌ನ ಶೇಕ್‌ಪೇಟ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗ್ಯಾಸ್ ಬುಕ್ ಮಾಡಿ ದಿನಗಟ್ಟಲೆ ಕಾಯುತ್ತಾ ಸುಸ್ತಾದ ಗ್ರಾಹಕರು, ತಾಳ್ಮೆ ಕಳೆದುಕೊಂಡು ಏಜೆನ್ಸಿಯಿಂದ ಹೊರಬರುತ್ತಿದ್ದ ಆಟೋದಿಂದಲೇ ಸಿಲಿಂಡರ್‌ಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಏಜೆನ್ಸಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಸ್ಥಳೀಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಗ್ಯಾಸ್ ಸಿಗದ ಆಕ್ರೋಶಕ್ಕೆ ಅನಿವಾರ್ಯವಾಗಿ ಇಂತಹ ಕೃತ್ಯಕ್ಕೆ ಮುಂದಾಗಿರುವ ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿನ ಅಸಮಾಧಾನಕ್ಕೆ ಕನ್ನಡಿ ಹಿಡಿದಿದೆ.
ಹೈದರಾಬಾದ್‌ನ ಫಿಲ್ಮ್‌ನಗರ ವ್ಯಾಪ್ತಿಯ ಶೇಕ್‌ಪೇಟ್‌ನಲ್ಲಿರುವ ಗ್ಯಾಸ್ ಏಜೆನ್ಸಿಯೊಂದರಿಂದ ಸಿಲಿಂಡರ್‌ಗಳನ್ನು ತುಂಬಿಕೊಂಡು ಆಟೋ ಹೊರಬರುತ್ತಿತ್ತು. ಈ ವೇಳೆ ಅಲ್ಲಿ ಜಮಾಯಿಸಿದ್ದ ಗ್ರಾಹಕರು, ಅನುಮತಿ ಇಲ್ಲದೆಯೇ ಆಟೋದಿಂದ ಸಿಲಿಂಡರ್‌ಗಳನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಏಜೆನ್ಸಿ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣವೇ ಅವರನ್ನು ತಡೆದಿದ್ದಾರೆ.
ಗ್ರಾಹಕರ ಆಕ್ರೋಶಕ್ಕೆ ಕಾರಣ : ಗ್ಯಾಸ್ ಬುಕ್ ಮಾಡಿ ಹಲವು ದಿನಗಳೇ ಕಳೆದರೂ ಸಿಲಿಂಡರ್ ವಿತರಣೆಯಾಗದ ಕಾರಣ ಗ್ರಾಹಕರು ತೀವ್ರ ಆಕ್ರೋಶಗೊಂಡಿದ್ದರು. “ದಿನಗಟ್ಟಲೆ ಕಾಯುತ್ತಿದ್ದರೂ ಗ್ಯಾಸ್ ಸಿಗುತ್ತಿಲ್ಲ” ಎಂದು ಕಿಡಿಕಾರಿದ ಜನರು, ಅನಿವಾರ್ಯವಾಗಿ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ ಇತರ ಸಮಸ್ಯೆಗಳು: ಕೇವಲ ಗ್ಯಾಸ್ ಮಾತ್ರವಲ್ಲದೆ, ಹೈದರಾಬಾದ್ ನಗರದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯೂ ಕಾಣಿಸಿಕೊಂಡಿದ್ದು, ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.

