ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಹದಿಹರೆಯದವರು ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆಗೆ ಅತಿಯಾಗಿ ದಾಸರಾಗುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸುಮಾರು ಶೇ. 25ರಷ್ಟು ಮಕ್ಕಳು ಇಂಟರ್ನೆಟ್ ಚಟಕ್ಕೆ ಬಲಿಯಾಗುತ್ತಿದ್ದು, ಇದರಿಂದ ಉಂಟಾಗುತ್ತಿರುವ ನಿದ್ರಾಹೀನತೆ ಮತ್ತು ಏಕಾಗ್ರತೆಯ ಕೊರತೆಯನ್ನು ನೀಗಿಸಲು ರಾಜ್ಯ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ನಿಮ್ಹಾನ್ಸ್ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ‘ಮಕ್ಕಳ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕುರಿತಾದ ಕರಡು ನೀತಿಯನ್ನು ಸಿದ್ಧಪಡಿಸಲಾಗಿದ್ದು, ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸ್ವಾಸ್ಥ್ಯ ಅಳವಡಿಕೆ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಮೂಲಕ ಮುಂದಿನ ಪೀಳಿಗೆಯನ್ನು ಮಾನಸಿಕವಾಗಿ ಸದೃಢಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಗೆ ದಾಸರಾಗುತ್ತಿರುವುದು ಪೋಷಕರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಸುಮಾರು ಶೇ. 25ರಷ್ಟು ಹದಿಹರೆಯದವರು ಇಂಟರ್ನೆಟ್ ಚಟಕ್ಕೆ ಒಳಗಾಗುತ್ತಿದ್ದು, ಇದರಿಂದ ಅವರಲ್ಲಿ ಆತಂಕ, ನಿದ್ರಾಹೀನತೆ ಹಾಗೂ ಏಕಾಗ್ರತೆಯ ಕೊರತೆ ಕಂಡುಬರುತ್ತಿರುವುದು ಅತ್ಯಂತ ಗಂಭೀರವಾದ ವಿಚಾರ.
ಈ ಸವಾಲನ್ನು ಎದುರಿಸಲು ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಿಕ್ಷಣ ಇಲಾಖೆ ಹಾಗೂ ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ‘ಮಕ್ಕಳ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕುರಿತು ಮಹತ್ವದ ಕರಡು ನೀತಿಯನ್ನು ಸಿದ್ಧಪಡಿಸಿದೆ ಎಂದಿದ್ದಾರೆ.
ಈ ನೀತಿಯ ಪ್ರಮುಖ ಉದ್ದೇಶಗಳು
* ಶಾಲಾ ಹಂತದಲ್ಲಿ ಜಾಗೃತಿ: ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸ್ವಾಸ್ಥ್ಯ ಅಳವಡಿಕೆ ಮತ್ತು ಡಿಜಿಟಲ್ ಸುರಕ್ಷತಾ ಸಮಿತಿಗಳ ರಚನೆ.
* ಶಿಕ್ಷಕರಿಗೆ ತರಬೇತಿ: ಸೈಬರ್ ಅಪಾಯಗಳನ್ನು ಗುರುತಿಸಲು ಮತ್ತು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಶಿಕ್ಷಕರನ್ನು ಸಜ್ಜುಗೊಳಿಸುವುದು.
* ಪೋಷಕರ ಸಹಭಾಗಿತ್ವ: ಮನೆಯಲ್ಲಿ ಮಕ್ಕಳು ಹಿತಮಿತವಾಗಿ ತಂತ್ರಜ್ಞಾನ ಬಳಸುವಂತೆ ಪೋಷಕರಲ್ಲಿ ಅರಿವು ಮೂಡಿಸುವುದು.
ಕೇವಲ ಮೊಬೈಲ್ ನಿಯಂತ್ರಣ ಮಾತ್ರವಲ್ಲದೆ, ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ಅಗತ್ಯವಿರುವವರಿಗೆ ಆಪ್ತಸಮಾಲೋಚನೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ನಮ್ಮ ಮುಂದಿನ ಪೀಳಿಗೆಯನ್ನು ಡಿಜಿಟಲ್ ಲೋಕದ ಅಡ್ಡಪರಿಣಾಮಗಳಿಂದ ರಕ್ಷಿಸಿ, ಅವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ಕರಡು ನೀತಿಯ ಬಗ್ಗೆ ಸಾರ್ವಜನಿಕರು, ಶಿಕ್ಷಕರು ಹಾಗೂ ಪೋಷಕರು ತಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಪೋಸ್ಟ್ ಹಂಚಿಕೊಂಡಿದ್ದಾರೆ.

