“ರೈತರು ಬೆಳೆದ ಬೆಳೆಗಳಿಗೆ ಭದ್ರತೆ ಬೇಕಾದರೆ ಸೂಕ್ತ ಮಾರುಕಟ್ಟೆ ಬೇಕು ಹಾಗಾಗಿ ಯಾವ ಯಾವ ಬೆಳೆಗಳಿಗೆ ಎಲ್ಲಿ ಸೂಕ್ತ ಮಾರುಕಟ್ಟೆ ಇದೆ ಎನ್ನುವುದನ್ನು ರೈತರು ತಿಳಿದುಕೊಳ್ಳಬೇಕು” ಎಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಈ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ ಎನ್ನುವುದು ಗೊತ್ತಿತ್ತು. ಆದರೆ ಇಲ್ಲಿ ಮಾವು, ದಾಳಿಂಬೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ” ಎಂದರು.
“ಒಂದೊಂದು ಬೆಳೆಯನ್ನು ಪರಿಚರಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕೆಂದು ನಾನು ಹೋದ ಕಡೆಯಲ್ಲ ಅಧಿಕಾರಿಗಳಿಗೆ ಹೇಳುತ್ತೇನೆ. ಕುವೆಂಪು ಅವರ ಕವಿ ವಾಣಿಯಂತೆ ರಾಜ್ಯಗಳು ಅಳಿಯಲಿ, ರಾಜ್ಯಗಳು ಉಳಿಯಲಿ ರೈತ ಬಿತ್ತುವ ಕಾಯಕ ಬಿಡುವುದಿಲ್ಲ ಎನ್ನುವಂತೆ ರೈತ ಯಾವಾಗಲೂ ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತಾನೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ” ಎಂದು ಹೇಳಿದರು.
“ಹಿಂದೆ ಮನಮೋಹನ್ ಸಿಂಗ್ ಸರ್ಕಾರ ರೈತರ 74 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತವಾಗಿ ವಿದ್ಯುತ್ ಕೊಟ್ಟರು. ಅದರಿಂದ ಇಂದಿಗೂ ಹಳ್ಳಿಯಲ್ಲಿ ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
“ಈಗ ನಮ್ಮ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಸುವ ಕೆಲಸ ಆಗಬೇಕು. ನಮ್ಮದು ಹೆಚ್ಚು ಮಳೆಯಾಶ್ರಿತ ರಾಜ್ಯವಾಗಿದೆ. ರಾಜ್ಯ ಸರಕಾರ ಈ ಬಜೆಟ್ನಲ್ಲಿ 65 ಸಾವಿರ ಕೋಟಿ ರೂ. ಹಣವನ್ನು ಕೃಷಿಗೆ ನೀಡಿದೆ” ಎಂದರು.
ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, “1950-60ರ ದಶಕದಿಂದ ಕೃಷಿಕ ಸಮಾಜ ಸರಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಕೃಷಿ, ತೋಟಗಾರಿಕೆ ಇಲಾಖೆ, ಪಶು ಇಲಾಖೆ ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ಜೊತೆಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ” ಎಂದು ಹೇಳಿದರು.
“ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು, ಕುಷ್ಟಗಿ ಸೇರಿದಂತೆ ಇತರೆ ಕಡೆ ಒಣ ಭೂಮಿ ಇದೆ. 1 ಲಕ್ಷ ಎಕರೆ ಟ್ರೀ ಕವರ್ ಮಾಡಲು ಈ ಹಿಂದೆಯೇ ಐದು ವರ್ಷಗಳ ಯೋಜನೆ ಹಾಕಲಾಗಿದೆ. ಪ್ರಧಾನ ಮಂತ್ರಿ ಧನ-ಧಾನ್ಯ ಯೋಜನೆ ಅಡಿ ಬರುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯು ಒಂದು” ಎಂದು ತಿಳಿಸಿದರು.
ಕೊಪ್ಪಳ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, “ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ನೀರಿನ ಸಮರ್ಪಕ ಬಳಕೆ ಹಾಗೂ ಮಾರುಕಟ್ಟೆ ಅರಿವು ಇಂದಿನ ಕಾಲಘಟ್ಟದಲ್ಲಿ ಬಹಳ ಮುಖ್ಯವಾಗಿದೆ. ವಿಶೇಷವಾಗಿ ದಾಳಿಂಬೆ ಬೆಳೆಗಾರರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಉತ್ಪಾದನೆ ಮತ್ತು ಹೆಚ್ಚಿನ ಆದಾಯವನ್ನು ಗಳಿಸಬಹುದು” ಎಂದು ಹೇಳಿದರು.
“ರೈತರು ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆಯುವ ಮುಂಚೆ ಸೂಕ್ತ ಮಣ್ಣು ಆಯ್ಕೆ ಮಾಡಬೇಕು. ಬೀಜ ಸಂಸ್ಕರಣೆ, ರೋಗ ಹಾಗೂ ಕೀಟ ನಿಯಂತ್ರಣ, ಹನಿ ನೀರಾವರಿ ಬಳಕೆ, ಪೋಷಕಾಂಶಗಳ ಸಮತೋಲನದ ಬಗ್ಗೆ ಸಂಪೂರ್ಣ ತಿಳಿದಿರಬೇಕು, ದಾಳಿಂಬೆ ಬೆಳೆಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಲ್ ಬ್ಲೈಟ್ ಹಾಗೂ ಇತರೆ ರೋಗಗಳ ನಿಯಂತ್ರಣ ಕ್ರಮಗಳ ಕುರಿತು ತಿಳಿದಿರಬೇಕು” ಎಂದರು.

