ಬಳ್ಳಾರಿ: ಬಳ್ಳಾರಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಬ್ಯಾಂಕ್ ಖಾತೆಯಿಂದ 16.17 ಕೋಟಿ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಸ್ಥಾಪಕ ಸೇರಿ 7 ಮಂದಿ ವಿರುದ್ಧ ಬಳ್ಳಾರಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡಳಿಯ ವರ್ಷಾಂತ್ಯದ ವಹಿವಾಟಿನ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಮಾರ್ಚ್ 11 ರಂದು ಪರಿಶೀಲಿಸುವಾಗ ವಂಚನೆ ಬೆಳಕಿಗೆ ಬಂದಿದೆ. ಮಂಡಳಿಯ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ಎಂ. ಕೊಳಲಗಿ ದೂರು ನೀಡಿದ್ದು, ಇದನ್ನು ಆಧರಿಸಿ ಮಂಡಳಿಯ ಹೊರಗುತ್ತಿಗೆ ನೌಕರನಾಗಿದ್ದ ಹೆಚ್.ವಿ.ಸಂತೋಷ್ ಕುಮಾರ್ ಮತ್ತು ವಂಚನೆಗೆ ಸಹಕಾರ ನೀಡಿದ ನಜೀರ್ ಅಹ್ಮದ್, ಕೆ.ಟಿ. ಶ್ರುತಿ, ಬೇಬಿ ಆಯಿಷಾ, ರಾಕೇಶ್ ಬಡಗಲ್, ವಿದ್ಯಾಲಕ್ಷ್ಮಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರ ವಿರುದ್ಧ ಮಾರ್ಚ್ 19 ರಂದು ಪ್ರಕರಣ ದಾಖಲಾಗಿದೆ.
ವರ್ಷಾಂತ್ಯದ ವಹಿವಾಟು ಪರಿಶೀಲನೆ ವೇಳೆ ಭಾರೀ ಮೊತ್ತ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮಂಡಳಿ ಅಧಿಕಾರಿಗಳು 2017ರ ರಿಂದ ಬ್ಯಾಂಕ್ ವ್ಯವಹಾರದ ಸ್ಟೇಟ್ಮೆಂಟ್ ಮತ್ತು ಚೆಕ್ ಗಳ ಪ್ರತಿ ಪಡೆದು ಪರಿಶೀಲಿಸಿದ್ದಾರೆ. 2022ರ ಅ. 15ರಿಂದ 2026ರ ಫೆಬ್ರವರಿ 20ರವರೆಗೆ ಒಟ್ಟು 16.17 ಕೋಟಿ ರೂ.ಗಳನ್ನು ನಕಲಿ ಸಹಿ ಮತ್ತು ಸೀಲ್ ಬಳಸಿ ಮಂಡಳಿಯ ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಗುತ್ತಿಗೆ ನೌಕರನಾಗಿದ್ದ ಹೆಚ್.ವಿ. ಸಂತೋಷ್ ಕುಮಾರ್ ವಂಚನೆಯ ಸೂತ್ರಧಾರನಾಗಿದ್ದಾನೆ. ಮಂಡಳಿಗೆ ಸಂಬಂಧಪಡದವರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ವಂಚನೆಯ ಮೊತ್ತ 16 ಕೋಟಿ ರೂ.ಗೂ ಅಧಿಕವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಲಾಗಿದೆ.

