ಬೆಂಗಳೂರು : ಇತ್ತೀಚೆಗಷ್ಟೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಕನ್ನಡದ ಹಿಟ್ ಸಿನಿಮಾದ ವಿರುದ್ಧ ಕೃತಿಚೌರ್ಯದ (Story Theft/Plagiarism) ಗಂಭೀರ ಆರೋಪ ಕೇಳಿಬಂದಿದೆ.
ನಿರ್ದೇಶಕ ರಾಘವೇಂದ್ರ ನಾಯಕ್ ಅವರು ಆ ಚಿತ್ರದ ಕಥೆ ತಮ್ಮದು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಆರೋಪಿಸಿದ್ದಾರೆ.ಯಾವ ಸಿನಿಮಾ ಎಂಬುದನ್ನ ನೇರವಾಗಿ ಹೇಳಿಲ್ಲ. ಈ ಸಿನಿಮಾದ ದ್ವಿತೀಯಾರ್ಧದ (Second Half) ಪ್ರಮುಖ ಅಂಶಗಳು ತಾವು ಸಿದ್ಧಪಡಿಸಿದ್ದ ಕಥೆಯನ್ನು ಹೋಲುತ್ತವೆ. ನನ್ನ ಕಥೆಯ ಆಶಯವನ್ನು ಬಳಸಿಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.. ಈ ಕಹಿ ಅನುಭವದ ಬೆನ್ನಲ್ಲೇ ರಾಘವೇಂದ್ರ ನಾಯಕ್ ಅವರು ಹೊಸ ಕಥೆಗಾರರಿಗೆ ಮಹತ್ವದ ಸಲಹೆ ನೀಡಿದ್ದಾರೆ:
ಥೆಗಳನ್ನು ಯಾವಾಗಲೂ SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ.ಕಥೆ ನಿರೂಪಣೆ (Narration) ಮಾಡುವಾಗ ಆಡಿಯೋ ರೆಕಾರ್ಡ್ ಮಾಡಿಕೊಳ್ಳಿ. ಇಮೇಲ್ ಮೂಲಕ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಿ ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಥೆ ಕಳ್ಳತನದ ಆರೋಪಗಳು ಹೆಚ್ಚಾಗುತ್ತಿದ್ದು, ಹಿಟ್ ಸಿನಿಮಾದ ಮೇಲೆ ಇಂತಹ ಆರೋಪ ಬಂದಿರುವುದು ಚಿತ್ರಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರ್ದೇಶಕರ ಪೋಸ್ಟ್ ನಲ್ಲಿ ಏನಿದೆ..?
ಸಿನಿಮಾ ಬರಹಗಾರರೇ ಮತ್ತು ಭವಿಷ್ಯದ ನಿರ್ದೇಶಕರೇ, ನನ್ನದೊಂದು ಸಣ್ಣ ಕಿವಿಮಾತು: ನೀವು ಯಾವುದೇ ಕಥೆ ಸಿದ್ಧಪಡಿಸಿದಾಗ, ಮೊದಲು ಅದನ್ನು SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂ (File) ನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ.
ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಿಗಾದರೂ ಕಥೆ ವಿವರಿಸುವ (Narration) ಮೊದಲು ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ. ಮೀಟಿಂಗ್ ಮುಗಿದ ಕೂಡಲೇ ಆ ಆಡಿಯೋ ಫೈಲ್ ಅನ್ನು ನಿಮಗೆ ನೀವೇ ಇಮೇಲ್ ಮಾಡಿಕೊಳ್ಳಿ. ಆಗ ನೀವು ನಾಯಕನಿಗಾಗಲಿ, ನಿರ್ಮಾಪಕರಿಗಾಗಲಿ ಅಥವಾ ನಿರ್ದೇಶಕರಿಗಾಗಲಿ ಕಥೆ ವಿವರಿಸಿದ್ದೀರಿ ಎಂಬುದಕ್ಕೆ ಭದ್ರವಾದ ದಾಖಲೆ ಇರುತ್ತದೆ.
ಇಂತಹ ಮುನ್ನೆಚ್ಚರಿಕೆ ವಹಿಸದ ಕಾರಣ ಇಂದು ನನಗೆ ದೊಡ್ಡ ದ್ರೋಹವಾಗಿದೆ. ನನ್ನ ಕಥೆಯ ಇಡೀ ದ್ವಿತೀಯಾರ್ಧವನ್ನು (Second Half) ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆಗೊಳಿಸಿದ್ದಾರೆ; ಆ ಸಿನಿಮಾ ಈಗ ಯಶಸ್ವಿಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ಕಥೆ ನನ್ನದು ಎಂಬುದು ನನ್ನ ಆಪ್ತ ವಲಯದ ಬಹಳಷ್ಟು ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಸ್ನೇಹಿತರಿಗೆ ತಿಳಿದಿದೆ. ಕನ್ನಡದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ನನಗೆ ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ನಿರ್ಮಾಪಕ-ನಿರ್ದೇಶಕರ ಜೊತೆಗೂಡಿ ಎರಡು ವರ್ಷಗಳ ಹಿಂದೆಯೇ ನಾನು ಆ ‘ನಿರ್ದೇಶಕ, ನಿರ್ಮಾಪಕ ಕಮ್ ನಟ’ನಿಗೆ ಕಥೆ ಹೇಳಿದ್ದೆ.
ನನ್ನ ಬಳಿ ಆ ಕಥೆ ನನ್ನದೇ ಎನ್ನುವುದಕ್ಕೆ ಸೂಕ್ತ ದಾಖಲೆಗಳಿವೆಯಾದರೂ, “ನಾನು ಅವರಿಗೆ ಈ ಕಥೆಯನ್ನೇ ಹೇಳಿದ್ದೆ” ಎನ್ನುವುದಕ್ಕೆ ಪೂರಕ ದಾಖಲೆಗಳಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಾನು ಅಸಹಾಯಕನಾಗಿ ಸುಮ್ಮನಿರಬೇಕಾಗಿದೆ.
ಭವಿಷ್ಯದಲ್ಲಿ ಬೇರೆ ಯಾವ ಬರಹಗಾರರಿಗೂ ಇಂತಹ ಮೋಸ ಆಗಬಾರದು ಎಂಬ ಸದಾಶಯದಿಂದ ಮತ್ತು ಅವರು ಮುನ್ನೆಚ್ಚರಿಕೆ ವಹಿಸಲಿ ಎಂಬ ಕಾರಣಕ್ಕೆ ಈ ಪೋಸ್ಟ್ ಹಾಕುತ್ತಿದ್ದೇನೆ. ದಯವಿಟ್ಟು ಬರಹಗಾರರೇ, ನಿಮ್ಮ ಕಲ್ಪನೆಗೆ ಕನ್ನ ಬೀಳದಂತೆ ಜಾಗ್ರತೆ ವಹಿಸಿ. ನಿಮಗೆ ಶುಭವಾಗಲಿ.

