ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿರುವ ಅಪ್ರಾಪ್ತ ಸಂತ್ರಸ್ತೆಯ 34 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಂತ್ರಸ್ತೆ ಪರವಾಗಿ ಆಕೆಯ ತಾಯಿ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠದಿಂದ ಈ ತೀರ್ಪು ನೀಡಲಾಗಿದೆ.
ಇಂತಹ ಸಮಯದಲ್ಲಿ ಗರ್ಭಪಾತ ನಡೆಸುವುದು ತಾಯಿ ಮತ್ತು ಮಗುವಿನ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡಬಹುದು ಎನ್ನುವ ವೈದ್ಯಕೀಯ ವರದಿಯನ್ನು ಹೈಕೋರ್ಟ್ ಪರಿಗಣಿಸಿದೆ. ಭ್ರೂಣವು ಈಗಾಗಲೇ 34 ವಾರ ಪೂರೈಸಿದೆ. ಈ ಹಂತದಲ್ಲಿ ಗರ್ಭಪಾತ ನಡೆಸುವುದು ವೈದ್ಯಕೀಯವಾಗಿ ಸುರಕ್ಷಿತವಲ್ಲ, 34 ವಾರಗಳ ನಂತರ ಗರ್ಭಪಾತ ಮಾಡುವುದು ಅಕಾಲಿಕ ಹೆರಿಗೆಗೆ ಸಮನಾಗಿದೆ. ತಾಯಿ ಮತ್ತು ಮಗು ಇಬ್ಬರಿಗೂ ಮಾರಕವಾಗಬಹುದು ಎಂದು ವೈದ್ಯರು ವರದಿ ನೀಡಿದ್ದಾರೆ.
ಇದನ್ನು ಪರಿಗಣಿಸಿದ ನ್ಯಾಯಪೀಠ, ಕಾನೂನು ಪ್ರಕಾರ 24 ವಾರಗಳ ನಂತರ ಗರ್ಭಪಾತಕ್ಕೆ ತಾಯಿಯ ಜೀವ ಉಳಿಸುವ ಅನಿವಾರ್ಯತೆ ಇದ್ದರೆ ಮಾತ್ರ ಅವಕಾಶವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಲೈಂಗಿಕ ದೌರ್ಜನ್ಯದ ಕಾರಣ ಮಾನಸಿಕ ಅಘಾತಕ್ಕೆ ಒಳಗಾಗಿದ್ದರೂ ಆಕೆಯ ದೈಹಿಕ ಸುರಕ್ಷತೆ ಮುಖ್ಯವಾಗಿದೆ. ಗರ್ಭಪಾತಕ್ಕೆ ವ್ಯತರಿಕ್ತ ವರದಿಯನ್ನು ವೈದ್ಯರು ನೀಡಿದ ಕಾರಣ ಅನುಮತಿ ನಿರಾಕರಿಸಲಾಗಿದೆ ಎಂದು ನ್ಯಾಯ ಪೀಠ ತಿಳಿಸಿದೆ.
ಸಂತ್ರಸ್ತರಿಗೆ ಹೆರಿಗೆಯಾಗುವವರೆಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ, ಪ್ರಸವಪೂರ್ವ ಆರೈಕೆ ಒದಗಿಸಬೇಕು. ಸುರಕ್ಷಿತ ಹೆರಿಗೆ, ನವಜಾತ ಶಿಶು ಆರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಗೆ ಕೌನ್ಸೆಲಿಂಗ್ ಮತ್ತು ಪುನರ್ವಸತಿ, ಸೂಕ್ತ ಪರಿಹಾರ ಒದಗಿಸಬೇಕು. ಒಂದು ವೇಳೆ ಸಂತ್ರಸ್ತೆ ಅಥವಾ ಆಕೆಯ ಪೋಷಕರು ಮಗು ಸಾಕಲು ಬಯಸದಿದ್ದಲ್ಲಿ ಕಾನೂನು ಬದ್ಧವಾಗಿ ಮಗುವಿನ ದತ್ತು ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಪೀಠ ನಿರ್ದೇಶಿಸಿದೆ.

