HomeKarnatakaಗೌಪ್ಯತೆ, ಇವಿಎಂ ನಿರ್ವಹಣೆ ಸೇರಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಗೌಪ್ಯತೆ, ಇವಿಎಂ ನಿರ್ವಹಣೆ ಸೇರಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ದಾವಣಗೆರೆ: ವಿಧಾನಸಭೆ ಉಪ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕುಮಾರ್ ರಮಣಿಕಾಂತ್ ಸೂಚಿಸಿದರು.

ಅವರು ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಾಭದ್ರ ಸಭಾಂಗಣದಲ್ಲಿ ನೋಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ ತಂಡಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.   

ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತದಾನದ ಗೌಪ್ಯತೆಗೆ ಧಕ್ಕೆ ಬರಬಾರದು. ವಿಶೇಷವಾಗಿ ಶಾಲಾ ಕೊಠಡಿಗಳಲ್ಲಿ ಕಿಟಕಿಗಳ ಮೂಲಕ ಹೊರಗಿನವರು ಮತದಾನವನ್ನು ಗಮನಿಸದಂತೆ ಮತಗಟ್ಟೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು., ವಿವಿಪ್ಯಾಟ್ ಯಂತ್ರಗಳು ಬೆಳಕಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಹೀಗಾಗಿ, ಮಷೀನ್‌ಗಳ ಮೇಲೆ ನೇರವಾಗಿ ತೀವ್ರವಾದ ಬೆಳಕು ಬೀಳದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತದಾನದ ಹಿಂದಿನ ದಿನವೇ ಬಿಎಲ್‌ಒಗಳು ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಯು ಯಂತ್ರಗಳ ನಿರ್ವಹಣೆಯ ಬಗ್ಗೆ ಸ್ಪಷ್ಟ ತರಬೇತಿ ಪಡೆದಿರಬೇಕು, ಈಗಾಗಲೇ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ತೃಪ್ತಿ ಇದೆ. ಈ ಸಣ್ಣಪುಟ್ಟ ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಿದರೆ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.      

ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಮಾತನಾಡಿ, ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನೂ ಗಮನಿಸುತ್ತಿರುತ್ತಾರೆ. ಆದ್ದರಿಂದ ನಿಯೋಜಿತ ಅಧಿಕಾರಿಗಳು ಮತ್ತು ತಂಡಗಳು ಮುಂದಿನ 15 ದಿನಗಳ ಕಾಲ ಅತ್ಯಂತ ಜಾಗರೂಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು, ಇದು ಉಪಚುನಾವಣೆಯಾಗಿರುವುದರಿಂದ ಇಡೀ ದೇಶ, ರಾಜ್ಯ, ಮಾಧ್ಯಮ ಹಾಗೂ ಸಾರ್ವಜನಿಕರು ದಾವಣಗೆರೆಯ ಚುನಾವಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಳೆಯ ಅನುಭವಗಳಿದ್ದರೂ ಈ ಬಾರಿ ಹೆಚ್ಚಿನ ಜಾಗೃತಿ ಅಗತ್ಯವಿದೆ, ಪ್ರಸ್ತುತ ಪ್ರತಿಯೊಬ್ಬ ಸಾರ್ವಜನಿಕರ ಬಳಿ ಮೊಬೈಲ್ ಇರುವುದರಿಂದ, ತಪಾಸಣೆ ಮತ್ತು ಅಧಿಕಾರಿಗಳ ಚಲನವಲನಗಳನ್ನು ದಾಖಲಿಸಲಾಗುತ್ತದೆ. ಹೀಗಾಗಿ ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಚುನಾವಣಾ ಕಾರ್ಯದಲ್ಲಿ ಸಮಯದ ಶಿಸ್ತು ಅತ್ಯಂತ ಮುಖ್ಯ. ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಇಡೀ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಾಧ್ಯ, ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪದೋಷಗಳಾಗದಂತೆ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ವರ್ತಿಸಬೇಕು, ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೆರವಿಗೆ ಸಿದ್ದವಿದೆ ಎಂದು ತಿಳಿಸಿದರು.

ವಾಹನ ತಪಾಸಣೆ ಮತ್ತು ದಾಖಲಾತಿ:

ಚೆಕ್-ಪೋಸ್ಟ್‌ಗಳಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಸಮಯವನ್ನು ದಾಖಲಿಸಬೇಕು. ಇದು ಯಾವುದೇ ಅಕ್ರಮ ನಗದು ಅಥವಾ ಮದ್ಯ ವಶಪಡಿಸಿಕೊಂಡ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಪ್ರಬಲ ಸಾಕ್ಷಿಯಾಗಿ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಎಸ್.ಎಸ್.ಟಿ(SST) ಚೆಕ್-ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಲೈವ್ ಸ್ಟ್ರೀಮಿಂಗ್ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ,  ಫ್ಲೈಯಿಂಗ್ ಸ್ಕ್ವಾಡ್(FST), ಜಿಎಸ್‌ಟಿ(GST), ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ(SST) ಹಾಗೂ ವಿಡಿಯೋ ವೀಕ್ಷಣೆ ತಂಡಗಳ(VVT) ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಗಿತ್ತೆ ಮಾದವ ವಿಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular