ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ಕಾಲುವೆ ಒಡೆದು ಹೋಗಿರುವ ಪರಿಣಾಮದಿಂದ ನಾಶವಾದ ಬೆಳೆಗೆ ರಾಜ್ಯ ಸರ್ಕಾರದದಿಂದ ಪರಿಹಾರ ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ ಸಭಾ ನಾಯಕರಾದ ಎನ್. ಎಸ್. ಭೋಸರಾಜು ಹೇಳಿದರು.
ಅವರು ಶುಕ್ರವಾರ ಕೊಪ್ಪಳ ತಾಲ್ಲೂಕಿನ ಬಸ್ಸಾಪೂರ ಗ್ರಾಮದ ಹತ್ತಿರ ಹೊಡೆದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 13ರ ಕಾಲುವೆ ಒಡೆದ ಪರಿಣಾಮವಾಗಿ ಸುಮಾರು 92 ಹೆಕ್ಟೇರ್ 10 ಗುಂಟೆ ಬೆಳೆ ನಾಶವಾಗಿದೆ ಎಂದು ಮಾಹಿತಿಯಿದೆ. ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ನೀರವಾರಿ ನಿಗಮ ನಿಯಮಿತದಿಂದ (ಕೆ.ಎನ್.ಎನ್.ಎಲ್) ಪ್ರತಿ ಹೆಕ್ಟೇರಿಗೆ ಸರ್ಕಾರವು ನಿಗದಿಪಡಿಸಿದಂತೆ ನಷ್ಟವಾದ ಬೆಳೆಗೆ ಪರಿಹಾರ ಒದಗಿಸಲಾಗುವುದು ಎಂದರು.
ಕೊಪ್ಪಳ ಹಾಗೂ ರಾಯಚೂರಿಗೆ ಕುಡಿಯಲು ನೀರು ಒದಗಿಸಲು ನೀರಾವರಿ ಇಲಾಖೆಯಿಂದ ಆದೇಶ ಬಂದ ಮೇರೆಗೆ ನೀರು ಬಿಡಲಾಗಿತ್ತು. ಸುಮಾರು 2 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಈ ಸಂದರ್ಭಗಳಲ್ಲಿ 40 ರಿಂದ 50 ಮೀಟರ್ ಕಾಲವೆ ಬೋಂಗು ಬಿದ್ದು ಒಡೆದು ಹೋಗಿದೆ. ಇಲ್ಲಿನ ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆ ಒಡದಿದೆ. ಕಾಲುವೆ ಒಡೆದ ವಿಚಾರವಾಗಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಕೆ.ಎನ್.ಎನ್.ಎಲ್. ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

