ಇರಾನ್ ಯುದ್ಧದ ಪರಿಣಾಮ ಭಾರತದ ಸಾಂಸ್ಕೃತಿಕ ವಲಯದ ಮೇಲೂ ಬೀರಿದಂತಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ (The Voice of Hind Rajab) ಚಿತ್ರದ ಬಿಡುಗಡೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ತಡೆ ನೀಡಿದೆ. ಈ ಚಿತ್ರವು ಬಿಡುಗಡೆಯಾದರೆ ಇಸ್ರೇಲ್ ಜೊತೆಗಿನ ಭಾರತದ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ಮಂಡಳಿ ವ್ಯಕ್ತಪಡಿಸಿದೆ ಎಂದು ‘ವೆರೈಟಿ’ ವರದಿ ಮಾಡಿದೆ.
ಏನಿದು ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ವಿವಾದ?
ಟುನೀಶಿಯಾ ಮೂಲದ ನಿರ್ದೇಶಕಿ ಕೌಥರ್ ಬೆನ್ ಹನಿಯಾ ನಿರ್ಮಿಸಿರುವ ಈ ಡಾಕ್ಯುಡ್ರಾಮಾ (ದಾಖಲೆ ಚಿತ್ರ), 2024ರಲ್ಲಿ ಗಾಜಾದಲ್ಲಿ ಇಸ್ರೇಲ್ ಆಕ್ರಮಣದ ವೇಳೆ ಮೃತಪಟ್ಟ 5 ವರ್ಷದ ಪ್ಯಾಲೆಸ್ತೀನ್ ಬಾಲಕಿ ಹಿಂದ್ ರಜಬ್‌ಳ ಹೃದಯಸ್ಪರ್ಶಿ ಕಥೆಯನ್ನು ಹೇಳುತ್ತದೆ.ಹಿಂದ್ ರಜಬ್ ಮತ್ತು ಆಕೆಯ ಕುಟುಂಬದವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಸ್ರೇಲ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 335 ಬುಲೆಟ್‌ಗಳು ಆ ಕಾರನ್ನು ಛಿದ್ರಗೊಳಿಸಿದ್ದವು.
ಚಿತ್ರದ ವಿತರಕ ಮನೋಜ್ ನಂದವಾನಾ ಅವರು ಫೆಬ್ರವರಿ 27 ರಂದು (ಪ್ರಧಾನಿ ಮೋದಿ ಇಸ್ರೇಲ್ ಭೇಟಿಯಿಂದ ಮರಳಿದ ಮರುದಿನ) ಚಿತ್ರವನ್ನು ಮಂಡಳಿಗೆ ಪ್ರದರ್ಶಿಸಿದರು. ಆದರೆ, “ಈ ಚಿತ್ರವನ್ನು ಪ್ರದರ್ಶಿಸಿದರೆ ಭಾರತ-ಇಸ್ರೇಲ್ ಸಂಬಂಧ ಹದಗೆಡಬಹುದು” ಎಂಬ ಕಾರಣ ನೀಡಿ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿತ್ರದ ಹಿಂದಿರುವ ಸತ್ಯ ಘಟನೆ
ಬಾಂಬ್ ದಾಳಿ ನಡೆಯುತ್ತಿದ್ದಾಗ ಹಿಂದ್ ರಜಬ್ ತನ್ನ ಕುಟುಂಬದೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಆಕೆಯ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಮೂವರು ಸೋದರಸಂಬಂಧಿಗಳು ಸ್ಥಳದಲ್ಲೇ ಮೃತಪಟ್ಟರು.ಕಾರಿನೊಳಗೆ ಶವಗಳ ಮಧ್ಯೆ ಸಿಲುಕಿದ್ದ ಹಿಂದ್, ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸಂಸ್ಥೆಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಳು. ಆಕೆಯ ಆ ಧ್ವನಿಮುದ್ರಣ (Audio) ಜಗತ್ತಿನಾದ್ಯಂತ ವೈರಲ್ ಆಗಿತ್ತು.ಆಕೆಯನ್ನು ರಕ್ಷಿಸಲು ಹೋದ ಅಂಬ್ಯುಲೆನ್ಸ್ ಮತ್ತು ಇಬ್ಬರು ವೈದ್ಯಕೀಯ ಸಿಬ್ಬಂದಿಗಳೂ ಸಹ ದಾಳಿಯಲ್ಲಿ ಮೃತಪಟ್ಟಿದ್ದರು. 15 ದಿನಗಳ ನಂತರ ಇವರೆಲ್ಲರ ಶವಗಳು ಪತ್ತೆಯಾಗಿದ್ದವು.
ಟೀಕೆಗಳ ಸುರಿಮಳೆ
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಮತ್ತು ಇಸ್ರೇಲ್ ನಡುವಿನ ಸಂಬಂಧ ಒಂದು ಚಿತ್ರದಿಂದ ಮುರಿದುಹೋಗುವಷ್ಟು ದುರ್ಬಲವೇ?” ಎಂದು ನಿರ್ದೇಶಕಿ ಕೌಥರ್ ಬೆನ್ ಹನಿಯಾ ” ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.ಇದು ಪ್ರಜಾಪ್ರಭುತ್ವಕ್ಕೆ ಅವಮಾನಕರ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸರ್ಕಾರದ ವಿದೇಶಾಂಗ ಸಂಬಂಧಕ್ಕೂ ಸಂಬಂಧವಿರಬಾರದು” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಜೂರಿ ಪ್ರಶಸ್ತಿ ಗೆದ್ದಿದೆ ಮತ್ತು ಅಮೆರಿಕ, ಯುಕೆ, ಇಟಲಿ ಹಾಗೂ ಫ್ರಾನ್ಸ್‌ನಂತಹ ದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

