HomeKarnatakaಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ...

ಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ 25ಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಮಂಗಳೂರು ವಿಭಾಗದ ಅರಣ್ಯಾಧಿಕಾರಿ ಮರಿಯಪ್ಪ ಕರಿಕಳನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ.

ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಕೆಲವರು ಮೂಢನಂಬಿಕೆಯಿಂದ ಮತ್ತು ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಕೊಟ್ಟಿದ್ದಾರೆ ಮತ್ತು ಕಾಡ್ಗಿಚ್ಚು ವೀಕ್ಷಕರ(Fire watchers) ಕೊರತೆಯೂ ಈ ಅನಾಹುತಕ್ಕೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಕುದುರೆಮುಖ ಅರಣ್ಯದೊಳಗಿರುವ ಕೆಲವು ನಿವಾಸಿಗಳು ಸ್ವಯಂ ಪ್ರೇರಿತವಾಗಿ ಹೊರಬರಲು ಇಚ್ಛಿಸಿದ್ದು, ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಕಾಂಪಾ ನಿಧಿಯಿಂದ ಅರಣ್ಯ ವಾಸಿಗಳ ಸ್ಥಳಾಂತರ ಕುರಿತಂತೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಿ ತಕ್ಷಣವೇ ಕಡತದಲ್ಲಿ ಸಲ್ಲಿಸುವಂತೆಯೂ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರಾದರೂ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದರೆ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ಈಶ್ವರ ಖಂಡ್ರೆ, ಅಧಿಕಾರಿ ಮತ್ತು ಸಿಬ್ಬಂದಿಯ ಲೋಪವಿದ್ದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದರು.

ಯುವ ವೈದ್ಯೆ ಸಾವಿಗೆ ಸಂತಾಪ:

ಶಿವಮೊಗ್ಗದ ಮೃಗಾಲಯದಲ್ಲಿ 27 ವರ್ಷದ ಯುವ ಪಶುವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದ ಸಚಿವರು, ಯಾವುದೇ ಸಿಬ್ಬಂದಿ ಅಥವಾ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡ(SOP) ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲು ತಿಳಿಸಿದರು.

ಈ ಸಾವು ಅತ್ಯಂತ ನೋವು ತಂದಿದೆ. ಈ ದುಃಖದ ಸಮಯದಲ್ಲಿ ಸರ್ಕಾರ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. 30 ಲಕ್ಷ ರೂ. ಪರಿಹಾರ ನೀಡಲು ಸಚಿವರು ಸೂಚಿಸಿದರು.

ಪ್ರಕರಣ ಕುರಿತಂತೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ಮಾಡಿಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಪಾಲ್ಗೊಂಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular