ದಾಂಡೇಲಿ: ಹೊಸ ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ, ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಮಾತನಾಡಿದ ಅವರು, ಮಂತ್ರಿ ಆಗಬೇಕೆಂಬ ನನಗೆ ಅತಿ ಆಸೆ ಇಲ್ಲ. ಅವರಿಗೆ ಬೇಕಾದರೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ. 9 ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ಮುಖ್ಯಮಂತ್ರಿಗಳ ಜೊತೆಗೆ ಕೆಲಸ ಮಾಡಿದ್ದೇನೆ. ಮಂತ್ರಿ ಮಾಡಿ ಎಂದು ನಾನು ಯಾರಿಗೂ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ತಮ್ಮನಿದ್ದಂತೆ. ಸಚಿವರು ಮತ್ತು ಅಧಿಕಾರಿಗಳು ಗೌರವದಿಂದ ಕಾಣುತ್ತಾರೆ. ನನ್ನ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲಾ ಕೆಲಸಗಳು ಆಗುತ್ತಿವೆ. ಹೀಗಾಗಿ ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಪಟ್ಟಿಲ್ಲ ದೇಶಪಾಂಡೆ ಹೇಳಿದ್ದಾರೆ.

