ಮಲ್ಲಿಗೆ ಹೂವಿನ ಸುಗಂಧ ಎಂದರೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಬೇಸಿಗೆ ಬಂತೆಂದರೆ ಮಲ್ಲಿಗೆ ಹೂವುಗಳು ವಿಪರೀತವಾಗಿ ಅರಳುತ್ತವೆ. ಪ್ರತಿಯೊಬ್ಬ ಮಹಿಳೆಯೂ ಮಲ್ಲಿಗೆ ಹೂ ಮುಡಿದು ಸಂಭ್ರಮಿಸುತ್ತಾರೆ. ಆದರೆ, ಈ ಮಲ್ಲಿಗೆ ಹೂವುಗಳಿಂದ ಮೆದುಳಿನಲ್ಲಿ ಎಂತಹ ಬದಲಾವಣೆಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ?
ಮಲ್ಲಿಗೆ ಹೂವಿನ ಕ್ರೇಜ್ : ಮದುವೆ ಇರಲಿ ಅಥವಾ ಹಬ್ಬ ಇರಲಿ, ಅಲ್ಲಿ ಮಲ್ಲಿಗೆ ಹೂವು ಇರಲೇಬೇಕು. ಬೇಸಿಗೆಯಲ್ಲಂತೂ ಇದರ ಬೇಡಿಕೆ ಇನ್ನು ಹೆಚ್ಚು. ಮಲ್ಲಿಗೆ ಹೂವಿನ ಸುಗಂಧಕ್ಕೆ ಮನಸೋಲದವರೇ ಇಲ್ಲ. ಇದೇ ಕಾರಣಕ್ಕೆ ಮದುವೆಯ ಮೊದಲ ರಾತ್ರಿಯಂದು ಶೋಭನದ ಕೋಣೆಯನ್ನು ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಗುತ್ತದೆ.
ಮಲ್ಲಿಗೆ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು? ಹಿಂದಿನ ಕಾಲದಿಂದಲೂ ಮಲ್ಲೆ ಹೂವು ಮುಡಿಯುವುದು ಒಂದು ಸಂಪ್ರದಾಯವಾಗಿದೆ. ಮಲ್ಲಿಗೆ ಹೂವು ಮುಡಿಯುವುದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ ಎಂದು ಪ್ರಕೃತಿ ಚಿಕಿತ್ಸಾ ತಜ್ಞರು ಹೇಳುತ್ತಾರೆ.
ಹ್ಯಾಪಿ ಹಾರ್ಮೋನ್ಗಳ ಉತ್ಪತ್ತಿ: ಮಲ್ಲಿಗೆ ಹೂವಿನ ಸುಗಂಧವು ಮೆದುಳಿನಲ್ಲಿರುವ ‘ಅಮಿಗ್ಡಾಲಾ’ ಮತ್ತು ‘ಹಿಪ್ಪೋಕ್ಯಾಂಪಸ್’ ಕೇಂದ್ರಗಳನ್ನು ಶಾಂತಗೊಳಿಸುತ್ತದೆ. ಇದು ಅತಿಯಾದ ಆಲೋಚನೆಗಳಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ. ಹೂವುಗಳಲ್ಲಿರುವ ‘ಜಾಸ್ಮೋನ್’ (Jasmone) ಎಂಬ ರಾಸಾಯನಿಕ ಸಂಯುಕ್ತವು ಮೆದುಳಿನಲ್ಲಿ ಡೋಪಮೈನ್ ಮತ್ತು ಸೆರೊಟೋನಿನ್ ಎಂಬ ಹ್ಯಾಪಿ ಹಾರ್ಮೋನ್ಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಾನಸಿಕ ಪ್ರಶಾಂತತೆ ದೊರೆಯುತ್ತದೆ.
ಅರೋಮಾಥೆರಪಿ: ಮಲ್ಲಿಗೆ ಹೂವಿನ ಸುಗಂಧವನ್ನು ಅರೋಮಾಥೆರಪಿಯಲ್ಲಿಯೂ ಬಳಸಲಾಗುತ್ತದೆ. ರಾತ್ರಿ ವೇಳೆ ಮಲ್ಲಿಗೆ ಹೂವುಗಳನ್ನು ಮುಡಿದರೆ ಅಥವಾ ಹತ್ತಿರ ಇಟ್ಟುಕೊಂಡರೆ ಹಾಯಾಗಿ ನಿದ್ರೆ ಬರುತ್ತದೆ.
ತಲೆನೋವಿಗೆ ಪರಿಹಾರ: ಮಲ್ಲಿಗೆ ಹೂವಿನ ವಾಸನೆಯು ಮೆದುಳನ್ನು ರಿಲ್ಯಾಕ್ಸ್ ಮಾಡುವುದರಿಂದ ಅನೇಕ ಸಂದರ್ಭಗಳಲ್ಲಿ ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜಾಸ್ಮಿನ್ ಆಯಿಲ್: ಒಂದು ವೇಳೆ ನಿಮಗೆ ಮಲ್ಲಿಗೆ ಹೂವುಗಳು ಸಿಗದಿದ್ದರೆ, ಮಾರುಕಟ್ಟೆಯಲ್ಲಿ ದೊರೆಯುವ ಜಾಸ್ಮಿನ್ ಆಯಿಲ್ ಬಳಸಬಹುದು. ಇದರ ಸುವಾಸನೆಯನ್ನು ಆಸ್ವಾದಿಸುವುದರಿಂದ ಕೂಡ ಮಾನಸಿಕ ನೆಮ್ಮದಿ ಮತ್ತು ಮೆದುಳಿಗೆ ಉಲ್ಲಾಸ ದೊರೆಯುತ್ತದೆ. ಒಟ್ಟಿನಲ್ಲಿ ಮಲ್ಲಿಗೆ ಹೂವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಉತ್ತಮವಾಗಿದೆ. ಇನ್ನು ಮುಂದೆ ಮಲ್ಲಿಗೆ ಹೂವುಗಳ ಈ ಲಾಭಗಳನ್ನು ಮಿಸ್ ಮಾಡಿಕೊಳ್ಳಬೇಡಿ!

