ಯುಗಾದಿ ಹಬ್ಬದ ಮರುದಿನ ಹೊಸ ತೊಡಕು ಹಬ್ಬ. ಹೋಳಿಗೆ ಊಟ ಮಾಡಿದ ಬಳಿಕ ಮಾಂಸದ ಅಡುಗೆ ಮಾಡುವುದು ಬಹುತೇಕ ಭಾಗದಲ್ಲಿ ರೂಢಿಯಲ್ಲಿದೆ. ಹೊಸ ತೊಡಕು ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಾಂಸದ ಅಂಗಡಿಗಳ ಎದುರು ಜನ ಖರೀದಿಗೆ ಮುಂದಾಗಿದ್ದಾರೆ.
ಕುರಿ, ಕೋಳಿ ಮಾಂಸ ಖರೀದಿ ಭರಾಟೆ ಜೋರಾಗಿದೆ. ಇನ್ನು ಕೆಲವು ಕಡೆ ಗುಡ್ಡೆ ಮಾಂಸದ ಮಾರಾಟವೂ ನಡೆದಿದೆ. ಕೆಲವು ಕಡೆಗಳಲ್ಲಿ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಕೂಡ ಯುಗಾದಿ ಆಚರಿಸಲಾಗುವುದು. ಆದರೆ ಯುಗಾದಿ ಹಬ್ಬಕ್ಕೆ ಊರಿಗೆ ಬಂದವರು ರಜೆ ಮುಗಿಸಿ ತೆರಳುವುದರಿಂದ ಶುಕ್ರವಾರ ಹೊಸ ತೊಡಕು ಆಚರಿಸಲಾಗುವುದು. ಹೀಗಾಗಿ ಚಿಕನ್, ಮಾಂಸ ಖರೀದಿ, ಅಡುಗೆ ತಯಾರಿ ಜೋರಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಯುಗಾದಿ ಹೊಸ ತೊಡಕು ಹಿನ್ನೆಲೆ ಗುಡ್ಡೆ ಮಾಂಸ ವ್ಯಾಪಾರ ಜೋರಾಗಿದೆ. ಬೆಳ್ಳಂಬೆಳಗ್ಗೆ ಗ್ರಾಮೀಣ ಸೊಗಡು ಗುಡ್ಡೆ ಮಾಂಸಕ್ಕೆ ಜನ ಮುಗಿಬಿದ್ದಿದ್ದಾರೆ. ಕೆಲ ಊರಿನಲ್ಲಿ ಗುಡ್ಡೆ ಮಾಂಸ ಮಾರಾಟ ಮಾಡಲಾಗುತ್ತಿದ್ದು, ವಿವಿಧ ಕಡೆಯಿಂದ ಬಂದ ಜನರು ಗುಡ್ಡೆ ಮಾಂಸ ಖರೀದಿಸುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ಚಿಕನ್, ಮಾಂಸ ಖರೀದಿ ಜೋರಾಗಿದೆ. ಮೈಸೂರು ರಸ್ತೆಯ ಪಾಪಣ್ಣ ಮಟನ್ ಅಂಗಡಿ ಮುಂದೆ ಜನರು ಕ್ಯೂ ನಿಂತಿದ್ದಾರೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ನಡೆವೆಯೂ ಹೊಸ ತೊಡಕು ಭರ್ಜರಿಯಾಗಿದೆ. ಮೈಸೂರಿನಲ್ಲಿ ಗುಡ್ಡೆ ಮಾಂಸದ ಭರಾಟೆ ಜೋರಾಗಿದೆ. ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಮಾರಾಟ ಮಾಡಲಾಗುತ್ತಿದೆ.

