ಖೋಟಾಂಗ್ (ನೇಪಾಳ): ನೇಪಾಳದ ಪೂರ್ವ ಭಾಗದ ಖೋಟಾಂಗ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಒಂದು ಲ್ಯಾಂಡಿಂಗ್ ಆಗುವ ವೇಳೆ ನಿಯಂತ್ರಣ ತಪ್ಪಿ ಹೊಲವೊಂದರಲ್ಲಿ ಪಲ್ಟಿಯಾದ ಭೀಕರ ಘಟನೆ ನಡೆದಿದೆ. ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನ ನಡೆದ ಬೆಳವಣಿಗೆಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
‘ಏರ್ ಡೈನಾಸ್ಟಿ’ ಸಂಸ್ಥೆಗೆ ಸೇರಿದ ಈ ಹೆಲಿಕಾಪ್ಟರ್ (ನೋಂದಣಿ ಸಂಖ್ಯೆ: 9N-ASQ) ಕಾಠ್ಮಂಡುವಿನಿಂದ ಶವವೊಂದನ್ನು ಹೊತ್ತು ತರುತ್ತಿತ್ತು. ಮಧ್ಯಾಹ್ನ ಸುಮಾರು 11:51ಕ್ಕೆ ಖೋಟಾಂಗ್‌ನ ಕೃಷಿ ಭೂಮಿಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಹೆಲಿಕಾಪ್ಟರ್ ಲ್ಯಾಂಡಿಂಗ್ ಝೋನ್ ಸಮೀಪಿಸುತ್ತಿದ್ದಂತೆ ಆರಂಭದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹೆಣಗಾಡಿದೆ. ಅದರ ಬಾಲದ ಭಾಗವು ಲಯಬದ್ಧವಾಗಿ ಮೇಲೆ ಕೆಳಗೆ ಆಡುತ್ತಿದ್ದು, ಕ್ಷಣಾರ್ಧದಲ್ಲಿ ವೇಗವಾಗಿ ತಿರುಗಲು (Spin) ಆರಂಭಿಸಿದೆ. ಅಂತಿಮವಾಗಿ ಹೆಲಿಕಾಪ್ಟರ್ ಸಂಪೂರ್ಣವಾಗಿ ಪಲ್ಟಿಯಾಗಿ ತಲೆಕೆಳಗಾಗಿ ಬಿದ್ದಿದೆ.
ಪ್ರಾಣಾಪಾಯವಿಲ್ಲ: ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಲಿಕಾಪ್ಟರ್‌ನಲ್ಲಿದ್ದ ಒಬ್ಬ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಪೈಲಟ್ ಸಬಿನ್ ಥಾಪಾ ಸೇರಿದಂತೆ ಇತರರು ಸುರಕ್ಷಿತವಾಗಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ಮತ್ತೊಂದು ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಕಾರಣ: ಪ್ರಾಥಮಿಕ ತನಿಖೆಯ ಪ್ರಕಾರ, ಲ್ಯಾಂಡಿಂಗ್ ವೇಳೆ ಬೀಸಿದ ಬಲವಾದ ಗಾಳಿ ಅಥವಾ ನೆಲದಲ್ಲಿ ಹಾರಿದ ಧೂಳು ಪೈಲಟ್‌ನ ದೃಷ್ಟಿಗೆ ಅಡ್ಡಿಯಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ನೇಪಾಳದಲ್ಲಿ ವಿಮಾನ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ. 2023ರಲ್ಲಿ ಸಂಭವಿಸಿದ ಯತಿ ಏರ್‌ಲೈನ್ಸ್ ವಿಮಾನ ದುರಂತದಲ್ಲಿ 72 ಮಂದಿ ಸಾವನ್ನಪ್ಪಿದ್ದರು. ಆ ಘಟನೆಯು ಪೈಲಟ್‌ನ ತಪ್ಪು ನಿರ್ಧಾರದಿಂದ ಸಂಭವಿಸಿತ್ತು ಎಂದು ತನಿಖಾ ವರದಿ ತಿಳಿಸಿತ್ತು.

