ಬೆಂಗಳೂರು : ನಾಡಿನಾದ್ಯಂತ ಹೊಸ ವರ್ಷದ ಮೊದಲ ಹಬ್ಬ ‘ಯುಗಾದಿ’ಯ ಸಡಗರ ಮನೆಮಾಡಿದೆ. ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಹೂವು, ಹಣ್ಣು ಹಾಗೂ ಹೊಸ ಬಟ್ಟೆಗಳ ಖರೀದಿಗಾಗಿ ಜನಸಾಗರವೇ ಹರಿದುಬಂದಿದ್ದು, ಹಬ್ಬದ ಕಳೆ ಕಳೆಗಟ್ಟಿದೆ.
ಹೌದು. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಬ್ಬಕ್ಕೆ ಅತಿ ಅವಶ್ಯಕವಾದ ಹೂವು ಮತ್ತು ಹಣ್ಣುಗಳ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್ ಹಾಗೂ ಮಲ್ಲೇಶ್ವರಂನಲ್ಲಿ ಹೂವುಗಳ ದರ ದುಪ್ಪಟ್ಟಾಗಿದೆ. ಅದರಲ್ಲೂ ವಿಶೇಷವಾಗಿ ಮಲ್ಲಿಗೆ ಮತ್ತು ಕನಕಾಂಬರ ಹೂವುಗಳು ಕೆಜಿಗೆ ₹1,000 ಗಡಿ ದಾಟಿದ್ದರೆ, ಸೇಬು, ದಾಳಿಂಬೆ ಹಾಗೂ ದ್ರಾಕ್ಷಿಯಂತಹ ಹಣ್ಣುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಯುಗಾದಿ ಹಬ್ಬದ ವಿಶೇಷವಾದ ‘ಬೇವು-ಬೆಲ್ಲ’ಕ್ಕೂ ಹೆಚ್ಚಿನ ಬೇಡಿಕೆ ಬಂದಿದ್ದು, ಬೇವಿನ ಸೊಪ್ಪು ಮತ್ತು ಮಾವಿನ ಸೊಪ್ಪಿನ ದರವೂ ಏರಿದೆ. ಅಡುಗೆ ಎಣ್ಣೆ ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯ ನಡುವೆ ಹೂವು-ಹಣ್ಣಿನ ಈ ದರ ಹೆಚ್ಚಳವು ಹಬ್ಬದ ಬಜೆಟ್ ಮೇಲೆ ಭಾರಿ ಪರಿಣಾಮ ಬೀರಿದೆ.
ನಗರದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಜಯನಗರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.ಅಚ್ಚರಿಯ ಬೆಳವಣಿಗೆಯಾಗಿ ಈ ಬಾರಿ ತರಕಾರಿ ಬೆಲೆಯಲ್ಲಿ ಅಂತಹ ಏರಿಕೆ ಕಂಡಿಲ್ಲ. ಆದರೆ, ಹೂವು ಮತ್ತು ಹಣ್ಣುಗಳ ಬೆಲೆ ಗ್ರಾಹಕರಿಗೆ ತುಸು ಬಿಸಿ ಮುಟ್ಟಿಸಿದೆ. ಮಲ್ಲಿಗೆ ಹಾಗೂ ಕನಕಾಂಬರ ಹೂವು ಕೆಜಿಗೆ ₹1,000 ವರೆಗೆ ಮಾರಾಟವಾಗುತ್ತಿದೆ.ಚಿಕ್ಕಪೇಟೆ ಮತ್ತು ಮೆಜೆಸ್ಟಿಕ್‌ನ ವಾಣಿಜ್ಯ ಸಂಕೀರ್ಣಗಳು ಹಾಗೂ ಮಾಲ್‌ಗಳು ಜನರಿಂದ ಕಿಕ್ಕಿರಿದು ತುಂಬಿವೆ.
ಬೆಲೆ ಏರಿಕೆಗೆ ಕಾರಣವೇನು ?
“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಏರಿಕೆ ಕಂಡಿದೆ. ಹಬ್ಬದ ಪ್ರಮುಖ ಖಾದ್ಯವಾದ ಹೋಳಿಗೆಗೆ ಬೇಕಾದ ಬೆಲ್ಲ ಮತ್ತು ಮೈದಾ ಬೆಲೆಯೂ ಏರಿರುವುದು ಗ್ರಾಹಕರಲ್ಲಿ ಬೇಸರ ಮೂಡಿಸಿದೆ.”
ಹೂವು-ಹಣ್ಣುಗಳ ದರ ಗಗನಕ್ಕೇರಿಕೆ
| ಪದಾರ್ಥ | ಬೆಲೆ (ರೂ.ಗಳಲ್ಲಿ) |
| ಗುಲಾಬಿ ಹೂ | ₹200 – ₹250 (ಕೆಜಿಗೆ) |
| ಸೇವಂತಿಗೆ | ₹200 (ಕೆಜಿಗೆ) |
| ಮಲ್ಲಿಗೆ/ಕನಕಾಂಬರ | ₹1,000 (ಕೆಜಿಗೆ) |
| ದಾಳಿಂಬೆ | ₹240 (ಕೆಜಿಗೆ) |
| ಏಲಕ್ಕಿ ಬಾಳೆ | ₹80 (ಕೆಜಿಗೆ) |

