ಬೆಂಗಳೂರು: ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಸ್ವಯಂ ಚಾಲಿತವಾಗಿ ನೀಡಲು ಒಂದು ವರ್ಷದಿಂದ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕೆ. ಅಬ್ದುಲ್ ಜಬ್ಬರ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕುಟುಂಬದ ಡೇಟಾಬೇಸ್ ನಲ್ಲಿ ಮನೆಯ ವಿಳಾಸ, ಜಾತಿ, ಆದಾಯದ ಮಾಹಿತಿ ಇರುತ್ತದೆ. ಅಲ್ಲಿಂದ ದತ್ತಾಂಶ ಸ್ವೀಕರಿಸಿ ಸ್ವಯಂ ಚಾಲಿತವಾಗಿ ಪ್ರಮಾಣ ಪತ್ರ ನೀಡಲಿದೆ ಎಂದು ಹೇಳಿದ್ದಾರೆ.
ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಸಕಾಲ ಯೋಜನೆಯಡಿ ಲಭ್ಯವಿರುವ ಎಲ್ಲಾ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡಲಾಗುತ್ತಿದೆ. ಜನಸಾಮಾನ್ಯರು ತಮ್ಮ ಮನೆಯಿಂದಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣ ಪತ್ರಗಳ ಅರ್ಜಿಯ ಪ್ರತಿಯೊಂದು ಹಂತ ದಾಟುವಾಗಲು ಅದರ ಮಾಹಿತಿಯನ್ನು ಮೆಸೇಜ್ ಮೂಲಕ ಅವರು ಮೊಬೈಲ್ಗೆ ತಲುಪಿಸುವ ವ್ಯವಸ್ಥೆ ಇದೆ. ಕೊನೆಗೆ ಜನ ಮನೆಯಲ್ಲಿ ಕುಳಿತು ಕೋರಿಕೆಯ ಪ್ರಮಾಣ ಪತ್ರಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

