ಹೆಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದ್ದು, ವೇಳಾಪಟ್ಟಿ ಘೋಷಣೆಯಾಗಿದೆ. ಏಪ್ರಿಲ್ 9ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದೆ.
ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಕಗ್ಗಂಟಾಗಿದೆ. ತಮ್ಮ ಆಪ್ತರಾಗಿದ್ದ ಹೆಚ್.ವೈ.ಮೇಟಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದ್ದಾರೆ.
ಆದರೆ ಹೆಚ್.ವೈ.ಮೇಟಿ ಕುಟುಂಬದಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದ್ದು, ಕಾಂಗ್ರೆಸ್ ಪಕ್ಷದ ತಲೆನೋವಿಗೆ ಕಾರಣವಾಗಿದೆ. ಮೇಟಿ ಪುತ್ರಿ ಮಹಾದೇವ ಹುಲ್ಲಪ್ಪ ಮೇಟಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಜವಾಬ್ದಾರಿ: ಹೆಚ್.ವೈ.ಮೇಟಿ ಕುಟುಂಬದಲ್ಲಿನ ಟಿಕೆಟ್ ಪೈಪೋಟಿ ನೋಡಿ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜವಾಬ್ದಾರಿ ನೀಡಿದೆ. ಆದ್ದರಿಂದ ಎಲ್ಲಾ ಕುಟುಂಬ ಸದಸ್ಯರನ್ನು ಸಿದ್ದರಾಮಯ್ಯ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಾರೆ.
ಹೆಚ್.ವೈ.ಮೇಟಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹ ಟಿಕೆಟ್ ಆಕಾಂಕ್ಷಿಗಳು. ಆದ್ದರಿಂದ ಕಾಂಗ್ರೆಸ್‌ಗೆ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿದೆ. ಆದ್ದರಿಂದ ಎಲ್ಲರನ್ನು ಸಿದ್ದರಾಮಯ್ಯ ಭೇಟಿ ಮಾಡಿ, ಮನವೊಲಿಕೆ ಮಾಡಲಿದ್ದಾರೆ.
ಹೆಚ್.ವೈ.ಮೇಟಿ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರನ್ನು ಬೆಂಗಳೂರಿಗೆ ಬರುವಂತೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ಬುಧವಾರ ಎಲ್ಲರೂ ಸಿದ್ದರಾಮಯ್ಯ ಭೇಟಿ ಮಾಡಲಿದ್ದು, ಯಾರು ಅಭ್ಯರ್ಥಿ? ಎಂಬುದು ಖಚಿತವಾಗುವ ನಿರೀಕ್ಷೆ ಇದೆ.
“ನಮ್ಮ ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಬೇಸರವಿಲ್ಲ. ಎಲ್ಲರೂ ಒಗ್ಗೂಡಿ ಜನರ ಆಶೀರ್ವಾದ ಕೇಳುತ್ತೇವೆ. ಕ್ಷೇತ್ರದ ಜನರು ತಂದೆ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ ಉಳಿಸಿಕೊಳ್ಳುತ್ತೇವೆ. ನಾವು ಟಿಕೆಟ್‌ಗೆ ಜಗಳ ಮಾಡಿದರೆ ಅದು ಕ್ಷೇತ್ರದ ಜನರಿಗೆ ಮಾಡಿದ ಅವಮಾನ” ಎಂದು ಉಮೇಶ ಮೇಟಿ ಹೇಳಿದ್ದಾರೆ.
ಹೆಚ್.ವೈ.ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಲಿಲ್ಲ ಎಂದರೆ ನಮಗೆ ಟಿಕೆಟ್ ಕೊಡಿ ಎಂದು ಸಾಲು ಸಾಲು ನಾಯಕರು ಬೇಡಿಕೆ ಇಟ್ಟಿದ್ದಾರೆ. ಆದರೆ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿ, ಅನುಕಂಪದ ಅಲೆಯಲ್ಲಿ ಉಪ ಚುನಾವಣೆ ಗೆದ್ದು ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ತಂತ್ರವಾಗಿದೆ.
ಸಿಎಂ ಸಿದ್ದರಾಮಯ್ಯ ಮೇಟಿ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಅವರು ಹೇಳಿದಂತೆ ಮೇಟಿ ಪುತ್ರರು, ಪುತ್ರಿಯರು ಕೇಳುತ್ತಾರೆ ಎಂದು ಅಂದಾಜಿಸಲಾಗಿದೆ. ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು?.

