ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಯೋಜನೆಯೊಂದನ್ನು ಟೀಕಿಸುವ ಭರದಲ್ಲಿ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರ ಹೆಸರನ್ನು ಎಳೆದು ತಂದು ಅಸಭ್ಯವಾಗಿ ಮಾತನಾಡಿದ್ದಾರೆ.
ಮಹಿಳೆಯರ ಸುರಕ್ಷತೆಗಾಗಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲೇ ಮಹಿಳೆಯೊಬ್ಬರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಚಿತ್ರರಂಗ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿವಾದದ ಹಿನ್ನೆಲೆ: ವಿಲ್ಲುಪುರಂ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಎಐಎಡಿಎಂಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಷಣ್ಮುಗಂ ಮಾತನಾಡುತ್ತಿದ್ದರು.
ಅಸಭ್ಯ ಮಾತು: “ಅಬ್ದುಲ್ ಕಲಾಂ ಅವರು ಕನಸು ಕಾಣಲು ಹೇಳಿದರು. ಸ್ಟಾಲಿನ್ ಅವರು ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ, ನಾವು ಈಡೇರಿಸುತ್ತೇವೆ ಎನ್ನುತ್ತಿದ್ದಾರೆ. ಒಂದು ವೇಳೆ ನನಗೆ ನಯನತಾರಾ ಬೇಕು ಎಂದು ನಾನು ಕನಸು ಕಂಡರೆ, ಅವರು ನಯನತಾರಾ ಜೊತೆ ನನ್ನ ಮದುವೆ ಮಾಡಿಸುತ್ತಾರೆಯೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ವ್ಯಾಪಕ ಆಕ್ರೋಶ: ಮಹಿಳೆಯರ ಘನತೆ ಕಾಪಾಡುವ ಬಗ್ಗೆ ಮಾತನಾಡಬೇಕಾದ ವೇದಿಕೆಯಲ್ಲೇ ಸಂಸದರು ನಟಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ. ಡಿಎಂಕೆ ನಾಯಕರು ಇದನ್ನು “ಅಸಹ್ಯಕರ ಮತ್ತು ಸ್ತ್ರೀದ್ವೇಷದ ಹೇಳಿಕೆ” ಎಂದು ಕಿಡಿಕಾರಿದ್ದಾರೆ.
ಚಿತ್ರರಂಗದ ಖಂಡನೆ: ದಕ್ಷಿಣ ಭಾರತದ ಚಲನಚಿತ್ರ ಕಲಾವಿದರ ಸಂಘ (SIAA) ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಷಣ್ಮುಗಂ ಅವರು ನಯನತಾರಾ ಅವರಿಗೆ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರು ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

