ಬೆಂಗಳೂರು: ಅಂಚೆ ಇಲಾಖೆಯು ಮಹಾನಗರಗಳಲ್ಲಿ ಸರಕು ಮತ್ತು ಪತ್ರಗಳ ತ್ವರಿತ ವಿಲೇವಾರಿಗಾಗಿ ಹೊಸ ‘ಡಿ-1’ (D-1) ಮತ್ತು ‘ಡಿ-2’ (D-2) ಸೇವೆಗಳನ್ನು ಮಂಗಳವಾರದಿಂದ ಜಾರಿಗೆ ತಂದಿದೆ. ಬೆಂಗಳೂರು ಸೇರಿದಂತೆ ದೇಶದ 6 ಪ್ರಮುಖ ನಗರಗಳಲ್ಲಿ ಈ ಸೇವೆ ಲಭ್ಯವಿದೆ.
ಈ ಸೇವೆಯು ಒಟಿಪಿ (OTP) ಆಧಾರಿತ ಸುರಕ್ಷಿತ ವಿತರಣೆ ಮತ್ತು ಎಸ್‌ಎಂಎಸ್ ಮೂಲಕ ಆರಂಭದಿಂದ ಅಂತ್ಯದವರೆಗೆ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿದೆ.ಬೃಹತ್ ಬುಕಿಂಗ್‌ಗೆ ಉಚಿತ ಪಿಕ್-ಅಪ್, ಕೇಂದ್ರೀಕೃತ ಬಿಲ್ಲಿಂಗ್ ಹಾಗೂ ವಿಳಂಬವಾದಲ್ಲಿ ಹಣ ಹಿಂತಿರುಗಿಸುವ ಖಾತರಿ ನೀಡಲಾಗಿದೆ.
ದೆಹಲಿಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಈ ಸೇವೆಗೆ ಚಾಲನೆ ನೀಡಿದರು. ಬೆಂಗಳೂರಿನ ಜಿಪಿಒದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ಗ್ರಾಹಕರಿಗೆ ರಸೀದಿ ನೀಡುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು.
ಏನಿದು ಹೊಸ ಸೇವೆ?
- ಡಿ-1 ಸೇವೆ: ಪತ್ರ ಅಥವಾ ಪಾರ್ಸೆಲ್‌ಗಳನ್ನು ಬುಕ್ ಮಾಡಿದ ಮರುದಿನವೇ ವಿತರಿಸಲಾಗುತ್ತದೆ.
- ಡಿ-2 ಸೇವೆ: ಗರಿಷ್ಠ ಎರಡು ದಿನಗಳ ಒಳಗೆ ವಿತರಣೆ ಖಾತರಿಪಡಿಸಲಾಗುತ್ತದೆ.
- ವ್ಯಾಪ್ತಿ: ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್.
- ಸ್ಥಳೀಯ ಸಿದ್ಧತೆ: ಬೆಂಗಳೂರಿನ ನಗರದಾದ್ಯಂತ 42 ಅಂಚೆ ಕಚೇರಿಗಳನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ.
ವಿಶೇಷತೆಗಳು:
- OTP ಆಧಾರಿತ ಸುರಕ್ಷಿತ ವಿತರಣೆ.
- ಬುಕ್ಕಿಂಗ್ ಮಾಡಿದವರಿಗೆ ಉಚಿತ ಪಿಕ್-ಅಪ್ ಸೌಲಭ್ಯ.
- ವಿತರಣೆ ವಿಳಂಬವಾದಲ್ಲಿ ಹಣ ಹಿಂತಿರುಗಿಸುವ ಭರವಸೆ.
- ಗ್ರಾಹಕರಿಗೆ ಪಾರ್ಸೆಲ್ ಎಲ್ಲಿದೆ ಎಂದು ತಿಳಿಯಲು ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ.

