ಬೆಂಗಳೂರು: ಕೃಷಿ ಭೂಮಿಯಲ್ಲಿನ ಮನೆಗಳಿಗೂ ಅಧಿಕೃತ ದಾಖಲೆ ನೀಡಲು ಹಾದಿ ಸುಗಮವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ ನಲ್ಲಿ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಂಡಿಸಿದ ಸೂಚನೆಗೆ ಉತ್ತರ ನೀಡಿದ ಸಚಿವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳಿಗೂ ಅಧಿಕೃತ ದಾಖಲೆ ನೀಡಲು ಹಾದಿ ಸುಗಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ವಸತಿ ಯೋಜನೆಗಳ ಅಡಿಯಲ್ಲಿ ತಮ್ಮದೇ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇ-ಸ್ವತ್ತು ನೀಡುವಲ್ಲಿ ಇದ್ದ ತಾಂತ್ರಿಕ ಅಡೆ-ತಡೆ ನಿವಾರಣೆ ಮಾಡಲಾಗಿದೆ. 2025ರ ಏಪ್ರಿಲ್ 7ಕ್ಕಿಂತ ಮೊದಲು ಕೃಷಿ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಶುಲ್ಕಗಳು ನಿಯಮಗಳ ಅನ್ವಯ ನಮೂನೆ 11 ಬಿ ಅನ್ನು ಸಾರ್ವಜನಿಕರು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

