ಹಾವೇರಿ: ಧ್ರುವ ಸರ್ಜಾ ಅಭಿನಯದ, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮದ ಐಟಂ ಸಾಂಗ್ ತೀವ್ರ ವಿವಾಅದಕ್ಕೆ ಕಾರಣವಾಗಿದ್ದು, ಪ್ರೇಮ್ ವಿರುದ್ಧ ದೆಹಲಿ, ಮುಂಬೈನಲ್ಲಿ ದೂರು ದಾಖಲಾಗಿದೆ. ಮತ್ತೊಂದೆಡೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಸಿನಿಮಾದ ಹಾಡಿನ ವಿಚಾರವಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಹಾಡು ಬಿಡುಗಡೆ ಆಗಬೇಕಂದ್ರೆ ಅದು ಸೆನ್ಸಾರ್ ಆಗಬೇಕು. ಸೆನ್ಸಾರ್ ಕಮಿಟಿ ಒಪ್ಪಿದೆ ಅಂತಾದ್ರೆ ಅದು ಅಶ್ಲೀಲ ಇಲ್ಲ ಅಂತಾ ಅರ್ಥ ಎಂದು ತಿಳಿಸಿದರು.
ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಹಾಗೂ ಅಶ್ಲೀಲ ನೃತ್ಯಗಳಿರುವ ಕಾರಣಕ್ಕೆ ಆಕ್ರೋಶ ವ್ಯಕ್ತವಾಗಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ, ನೋಡುಗರೂ ಕೂಡಾ ಹಾಗೇ ಆಗಿದ್ದಾರೆ. ಬೇಡಿಕೆ ಮೇಲೆ ಉತ್ಪಾದನೆ ಅನ್ನೋ ಹಾಗೆ ಆಗಿದೆ ಎಂದಿದ್ದಾರೆ.
ರಾಜ್ಕುಮಾರ್, ವಿಷ್ಣುವರ್ಧನ್ ಅವರಂತಹ ಮೇರುನಟರ ಹಿಂದಿನ ಸಿನಿಮಾ ಹಾಡುಗಳು ಇಂದಿಗೂ ಬದುಕಿವೆ. ಈಗ ಎಷ್ಟೇ ಅಶ್ಲೀಲ ಬಂದ್ರೂ ಆ ಹಾಡುಗಳಿಗೆ ಒಂದು ವರ್ಷವೂ ಆಯುಷ್ಯ ಇಲ್ಲ. ಸ್ವಲ್ಪ ಸಮಯಕ್ಕೆ ಪಾಪ್ಯುಲರ್ ಆಗಬಹುದು. ಆದರೆ ಅದ್ಯಾವುದಕ್ಕೂ ಲಾಂಗ್ ಲೈಫ್ ಇಲ್ಲ. ಹಿಂದಿನ ಹಾಡುಗಳು ಉತ್ತಮ ಸಂಸ್ಕೃತಿ ಹೊಂದಿದ್ದವು. ಆದರೆ ಈಗ ಹಾಗಿಲ್ಲ. ಅಶ್ಲೀಲತೆಯುಳ್ಳ ಹಾಡುಗಳನ್ನು ಬರೆಯೋದ್ರಿಂದ ಸಂಸ್ಕೃತಿಯನ್ನು ಹಾಳು ಮಾಡಿದಂತಾಗುತ್ತದೆ. ಯುವಕರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಬಾರದು. ಉತ್ತಮ ಸಾಹಿತ್ಯವಿದ್ರೆ ಜನರು ಖಂಡಿತಾ ಒಪ್ಪುತ್ತಾರೆ. ಅವುಗಳಿಗೆ ಲಾಂಗ್ಲೈಫ್ ಕೂಡಾ ಇದೆ ಎಂದು ತಿಳಿಸಿದರು.
ಸಿನಿಮಾ ಇಂಡಸ್ಟ್ರಿಯಲ್ಲಿ ಕಮಿಟ್ಮೆಂಟ್ಸ್ ಬಹಳ ಕಡಿಮೆಯಾಗಿದೆ. ಒಬ್ಬ ನಿರ್ಮಾಪಕ ಸಿಕ್ಕಿದ್ರು ಅಂದ್ರೆ ಅವರನ್ನು ಯಾವ ರೀತಿ ಸುಲಿಗೆ ಮಾಡಬೇಕು ಅನ್ನೋ ಪಿತೂರಿ ಬಹಳ ನಡೆಯುತ್ತಿದೆ. ಇನ್ನು, ನಾವು ಆ ಕಾಲದಲ್ಲಿ ಮಾಡುತ್ತಿದ್ದ ಸಿನಿಮಾಗಳು ಮತ್ತು ಸದ್ಯದ ಪರಿಸ್ಥಿತಿ ವಿಭಿನ್ನ. ಹಾಗಾಗಿ, ಕನ್ನಡದಲ್ಲಿ ಸಕ್ಸಸ್ ರೇಟ್ ಕಡಿಮೆ ಇದೆ ಎಂದರು.
ಉತ್ತಮ ಚಿತ್ರಗಳು ಬಂದ್ರೆ ಜನರು ಖಂಡಿತವಾಗಿಯೂ ಸಿನಿಮಾ ನೋಡ್ತಾರೆ. ನಾವು ಜನರನ್ನು ದೂಷಿಸೋದು ತಪ್ಪು. ಥಿಯೇಟರ್ಸ್ಗೆ ಪ್ರೇಕ್ಷಕರು ಬರೋದಿಲ್ಲ ಅನ್ನೋದಕ್ಕಿಂತ, ಉತ್ತಮ ಚಿತ್ರಗಳನ್ನು ಮಾಡುವ ಪ್ರಯತ್ನ ಆಗಬೇಕು. ಸು ಫ್ರಮ್ ಸೋ, ಕಾಂತಾರ ಬಿಟ್ರೆ ಬೇರೆ ಯಾವುದೇ ದೊಡ್ಡ ಮಟ್ಟದ ಯಶಸ್ಸು ಕನ್ನಡದಲ್ಲಿ ಸಿಕ್ಕಿಲ್ಲ ಎಂದರು.

