ಚಿಕ್ಕಮಗಳೂರು: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಕಳೆದ 11 ತಿಂಗಳಿಂದ ವೇತನ ನೀಡದ ಕಾರಣಕ್ಕೆ ಮನನೊಂದ ಗ್ರಾಮ ಪಂಚಾಯಿತಿ ನೀರುಗಂಟಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನಲೆ:
ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ನೀರುಗಂಟಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ರಮೇಶ್ (47) ಎಂಬುವವರೇ ಮೃತ ದುರ್ದೈವಿ. ಇವರಿಗೆ ಪತ್ನಿ, ಮಗ ಹಾಗೂ ಓರ್ವ ಪುತ್ರಿ ಇದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಸಂತ್ರಸ್ತ ಕುಟುಂಬ ಈಗ ಬೀದಿಗೆ ಬಿದ್ದಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
“ನನ್ನ ಸಾವಿಗೆ ನಾನೇ ನೇರ ಕಾರಣ” ಎಂದು ಪತ್ರ ಆರಂಭಿಸಿದ್ದಾರೆ.ಕಳೆದ 11 ತಿಂಗಳಿಂದ ವೇತನ ನೀಡದೆ ಸತಾಯಿಸಲಾಗಿದೆ.ಸಂಬಳವಿಲ್ಲದೆ ಮನೆ ನಡೆಸಲು ಮಾಡಿದ್ದ ಸಾಲ ತೀರಿಸಲಾಗದೆ, ಸಾಲಗಾರರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು.ಈ ಅವಮಾನ ಮತ್ತು ಆರ್ಥಿಕ ಸಂಕಷ್ಟ ತಾಳಲಾರದೆ ಸಾವಿಗೆ ಶರಣಾಗುತ್ತಿರುವುದಾಗಿ ನೋವಿನಿಂದ ಬರೆದುಕೊಂಡಿದ್ದಾರೆ.
ಅಧಿಕಾರಿಗಳ ವಿಚಿತ್ರ ವಾದ:
ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO), “ಕಳೆದ ಫೆಬ್ರವರಿವರೆಗೆ ವೇತನ ಪಾವತಿಸಲಾಗಿದೆ” ಎಂದು ಹೇಳಿಕೆ ನೀಡುತ್ತಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ವೇತನ ಪಾವತಿಯಾಗಿದ್ದರೆ ಪ್ರಾಮಾಣಿಕ ನೌಕರ ಸಾವಿಗೆ ಶರಣಾಗುತ್ತಿರಲಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮ ಮನವಿ : ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಆರ್ಥಿಕ ಅಥವಾ ಮಾನಸಿಕ ಸಂಕಷ್ಟದಲ್ಲಿದ್ದರೆ ಸಹಾಯವಾಣಿಗಳ ನೆರವು ಪಡೆಯಿರಿ.

