ಬೆಂಗಳೂರು: 16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಬಾಲ್ಯ ವಿವಾಹ ಪ್ರಕರಣದಲ್ಲಿ ಪತಿ, ತಂದೆ, ತಾಯಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬಾಲ್ಯ ವಿವಾಹ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆಯೋಜಕರ ವಿರುದ್ಧವೂ ಹೈಕೋರ್ಟ್ ಕ್ರಮದ ಎಚ್ಚರಿಕೆ ನೀಡಿದೆ. ದೇವಾಲಯದಲ್ಲಿ ಬಾಲ್ಯ ವಿವಾಹ ನಡೆದರೆ ಆಡಳಿತ ಮಂಡಳಿ, ಪುರೋಹಿತರು, ಚೌಟ್ರಿಯಲ್ಲಿ ಬಾಲ್ಯ ವಿವಾಹ ನಡೆದರೆ ಆಯೋಜಕರು ಹೊಣೆಯಾಗುತ್ತಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಕೊರೋನಾ ವೇಳೆ ಅಪ್ರಾಪ್ತೆಯೊಂದಿಗೆ ಪೋಷಕರು ಮದುವೆ ಮಾಡಿದ್ದರು. ದೇವನಹಳ್ಳಿಯ ಮಂಜುನಾಥನ ಜೊತೆಗೆ 16 ವರ್ಷದ ಬಾಲಕಿಯ ಮದುವೆ ಮಾಡಿದ್ದರು. 18 ವರ್ಷ ದಾಟಿದ ನಂತರ ಮದುವೆಯನ್ನು ನೋಂದಣಿ ಮಾಡಿಸಿದ್ದರು. 18 ವರ್ಷ ದಾಟಿರುವುದರಿಂದ ಬಾಲ್ಯ ವಿವಾಹ ಪ್ರಕರಣ ರದ್ದು ಮಾಡುವಂತೆ ಕೋರಿದ್ದರು.
ಬಾಲ್ಯ ವಿವಾಹದಿಂದ ಬಾಲಕಿಯ ಶಿಕ್ಷಣದ ಕನಸು ಭಗ್ನವಾಗುತ್ತದೆ. ವಿದ್ಯೆ ಕಲಿಯುವ ವಯಸ್ಸಲ್ಲಿ ಸಂಸಾರದ ಹೊಣೆ ಹೊರಿಸುವುದು ಸರಿಯಲ್ಲ. ಪ್ರಕರಣ ರದ್ದು ಮಾಡಿದರೆ ಬಾಲ್ಯ ವಿವಾಹ ತಡೆ ಕಾಯ್ದೆಯ ಉದ್ದೇಶ ವಿಫಲವಾಗುತ್ತದೆ. ಹೀಗಾಗಿ ಪ್ರಕರಣ ರದ್ದು ಕೋರಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

