ಬೆಂಗಳೂರು: ಗಿಳಿ ಶಾಸ್ತ್ರದ ಹೆಸರಲ್ಲಿ ವಂಚಿಸಿದ್ದ ಆರೋಪಿ ಶೇಖರ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಭಾರತಿನಗರ ಠಾಣೆ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ಐಟಿ ಅಧಿಕಾರಿ ಸತ್ಯನಾರಾಯಣ್ ಅವರಿಂದ ಶೇಖರ್ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ. ಕೋರಮಂಗಲ ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯನಾರಾಯಣ ವರ್ಗಾವಣೆಗಾಗಿ ಗಿಳಿ ಶಾಸ್ತ್ರದ ಮೊರೆ ಹೋಗಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದಾಗ ಗಿಳಿ ಶಾಸ್ತ್ರದ ವ್ಯಕ್ತಿಯ ಪರಿಚಯವಾಗಿತ್ತು. ಗಿಳಿ ಶಾಸ್ತ್ರ ಹೇಳುತ್ತೇನೆ ನಿಮಗೆ ಒಳ್ಳೆಯದಾಗುತ್ತೆ ಎಂದು ಶೇಖರ್ ತಿಳಿಸಿದ್ದ.
ಭಾರತಿನಗರದ ಶ್ರೀ ಸರ್ಕಲ್ ಬಳಿ ಆರೋಪಿ ಶೇಖರ್ ಗಿಳಿ ಶಾಸ್ತ್ರ ಹೇಳುತ್ತಿದ್ದ. ಮುಖ ನೋಡಿ ಜಾತಕ ಭವಿಷ್ಯ ಹೇಳುತ್ತೇನೆ ಎಂದು ನಂಬಿಸಿದ್ದ. ಜೀವನ ಸುಧಾರಣೆ ಆಗಬೇಕಾದರೆ ಪೂಜೆ ಮಾಡಿಸಿ ಎಂದು ಹೇಳಿದ್ದ. ನಂತರ 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ಮಾಡಿದ್ದ. ನಂತರ ಪದೇ ಪದೇ ಅಧಿಕಾರಿಗೆ ಕರೆ ಮಾಡುತ್ತಿದ್ದ.
ಗಿಳಿ ಶಾಸ್ತ್ರದ ಶೇಖರ್ ಮಾತು ನಂಬಿ ವರ್ಗಾವಣೆಯ ಬಗ್ಗೆ ಆತನ ಬಳಿ ಅಧಿಕಾರಿ ಕೇಳಿದಾಗ ದೊಡ್ಡ ಪೂಜೆ ಮಾಡಬೇಕು. ಚಿನ್ನಾಭರಣ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದ. ಗಿಳಿ ಶಾಸ್ತ್ರದವನ ಮಾತು ನಂಬಿ 35 ಲಕ್ಷದ ಮೌಲ್ಯದ 190 ಗ್ರಾಂ ಚಿನ್ನ, 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಐಟಿ ಅಧಿಕಾರಿ ಸತ್ಯನಾರಾಯಣ ನೀಡಿದ್ದರು.
ಒಂದು ದಿನದಲ್ಲಿ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್ ನಂತರ ಇನ್ನೂ ಪೂಜೆ ಮುಗಿದಿಲ್ಲ ಎಂದು ಸತಾಯಿಸುತ್ತಿದ್ದ. ಕಡೆಗೆ ಮೋಸ ಹೋಗಿರುವ ವಿಚಾರ ತಿಳಿದ ಸತ್ಯನಾರಾಯಣ ದೂರು ನೀಡಿದ್ದರು. ಭಾರತಿನಗರ ಪೊಲೀಸ್ ಠಾಣೆಗೆ ಐಟಿ ಅಧಿಕಾರಿ ಸತ್ಯನಾರಾಯಣ ದೂರು ನೀಡುತ್ತಿದ್ದರು. ಸದ್ಯ ಗಿಳಿ ಶಾಸ್ತ್ರದ ಹೆಸರಲ್ಲಿ ವಂಚಿಸಿದ್ದ ಆರೋಪಿ ಶೇಖರ್ ನನ್ನು ಬಂಧಿಸಲಾಗಿದೆ.

