ಬೆಂಗಳೂರು : 1,200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ವಿನಾಯಿತಿ ಇಲ್ಲ ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ರಿಯಾಯಿತಿ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಒಸಿ’ (Occupancy Certificate) ವಿನಾಯಿತಿಯು ಕೇವಲ ಸಣ್ಣ ನಿವೇಶನಗಳಿಗೆ ಮಾತ್ರ ಸೀಮಿತ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. 1,200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ‘ಓಸಿ’ ವಿನಾಯಿತಿ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ, ರಾಜ್ಯ ಸರ್ಕಾರವು ಸಣ್ಣ ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿದೆ.
1,200 ಚದರಡಿ (30×40 ಸೈಟ್) ವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಈ ನಿಯಮ ಅನ್ವಯಿಸುತ್ತದೆ.ನೆಲಮಹಡಿ + 2 ಅಂತಸ್ತುಗಳು (G+2) ಅಥವಾ ಸ್ಟಿಲ್ಟ್ ಪಾರ್ಕಿಂಗ್ + 3 ಅಂತಸ್ತುಗಳಿರುವ (Stilt+3) ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಸಿಗಲಿದೆ.
ಮೂಲಭೂತ ಸೌಕರ್ಯ: ಈ ಹಿಂದೆ ‘ಒಸಿ’ ಇಲ್ಲದ ಕಾರಣ ಬೆಸ್ಕಾಂ (BESCOM) ವಿದ್ಯುತ್ ಮತ್ತು ಜಲಮಂಡಳಿ (BWSSB) ನೀರು ಸಂಪರ್ಕ ನೀಡಲು ನಿರಾಕರಿಸುತ್ತಿದ್ದವು. ಈಗ ಈ ವಿನಾಯಿತಿಯಿಂದಾಗಿ ಸುಲಭವಾಗಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಬಹುದು.
ಯಾರಿಗೆ ಲಾಭ?
ಬೆಂಗಳೂರಿನಲ್ಲಿ ಸುಮಾರು 3.3 ಲಕ್ಷಕ್ಕೂ ಹೆಚ್ಚು ಮನೆಗಳು ‘ಒಸಿ’ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಪಡೆಯಲು ಪರದಾಡುತ್ತಿದ್ದವು. ಸರ್ಕಾರದ ಈ ಆದೇಶದಿಂದ ಅಂತಹ ಲಕ್ಷಾಂತರ ಮನೆಮಾಲೀಕರಿಗೆ ಕಾನೂನುಬದ್ಧವಾಗಿ ಸೌಲಭ್ಯಗಳು ಸಿಗಲಿವೆ. ಈ ವಿನಾಯಿತಿಯು ಕೇವಲ 1200 ಚದರಡಿ ಒಳಗಿನ ವಸತಿ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿದ್ದು, ದೊಡ್ಡ ಅಪಾರ್ಟ್‌ಮೆಂಟ್‌ಗಳು ಅಥವಾ ವಾಣಿಜ್ಯ ಕಟ್ಟಡಗಳಿಗೆ ‘ಒಸಿ’ ಕಡ್ಡಾಯವಾಗಿರುತ್ತದೆ.

