ಕುಮಾರ ಪರ್ವತ ಚಾರಣಕ್ಕೆ ಹಲವಾರು ಜನರು ಯೋಜನೆ ರೂಪಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುಷ್ಪಗಿರಿ ಅಥವಾ ಕುಮಾರ ಪರ್ವತ ಚಾರಣ ಮಾಡುವ ಮೊದಲು ಬದಲಾಗಿರುವ ನಿಯಮಗಳ ಕುರಿತು ತಿಳಿಯಿರಿ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯಂತೆ ಕುಮಾರ ಪರ್ವತ ಚಾರಣಕ್ಕೆ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಚಾರಣಕ್ಕೂ ಮೊದಲು ಆನ್‌ಲೈನ್ ಬುಕ್ಕಿಂಗ್ ಕಡ್ಡಾಯವಾಗಿದೆ.
ಕುಮಾರ ಪರ್ವತ ಚಾರಣಕ್ಕೆ ಹೊಸ ನಿಯಮಗಳು
- ಆನ್‌ಲೈನ್ ಟಿಕೆಟ್ ಬುಕಿಂಗ್ ಕಡ್ಡಾಯ. ಇನ್ನು ಮುಂದೆ ಕುಮಾರ ಪರ್ವತ ಚಾರಣಕ್ಕೆ ಸ್ಪಾಟ್ ಬುಕಿಂಗ್ ಇರುವುದಿಲ್ಲ. ನೀವು ಮುಂಚಿತವಾಗಿಯೇ ಅರಣ್ಯ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಟಿಕೆಟ್ ಪಡೆಯುವುದು ಕಡ್ಡಾಯ.
- ಕುಮಾರ ಪರ್ವತ ಚಾರಣಕ್ಕೆ ಪ್ರತಿನಿತ್ಯ ಕೇವಲ 150 ಜನರಿಗೆ ಅವಕಾಶ. ಚಾರಣ ಪಥದಲ್ಲಿ ಆಗುವ ಜನದಟ್ಟಣೆ ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಪ್ರತಿದಿನ ಕೇವಲ 150 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
- ರಾತ್ರಿ ವಾಸ್ತವ್ಯವಿಲ್ಲ. ವನ್ಯಜೀವಿಗಳ ಸುರಕ್ಷತೆಗಾಗಿ ಮತ್ತು ಮಾನವ ವನ್ಯಜೀವಿ ಸಂಘರ್ಷ ತಡೆಯಲು ಕುಮಾರ ಪರ್ವತ ಬೆಟ್ಟದ ಮೇಲೆ ರಾತ್ರಿ ವಾಸ್ತವ್ಯ ಹೂಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಕುಮಾರ ಪರ್ವತ ಚಾರಣ ಸಮಯ ಮತ್ತು ದೂರ ಕಡಿತ. ಚಾರಣವನ್ನು ಕೇವಲ 20 ಕಿ.ಮೀ. (ಶೇಷಪರ್ವತದವರೆಗೆ) ಸೀಮಿತಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ಚಾರಣ ಆರಂಭಿಸಿ, 12 ಗಂಟೆಯ ಒಳಗಾಗಿ ಅಂದರೆ ಸಂಜೆ 6 ಗಂಟೆಗೆ ಮರಳಿ ಬರಬೇಕು.
- ಬೇಸಿಗೆ ಮತ್ತು ಮಳೆಗಾಲದಲ್ಲಿ ನೋ ಎಂಟ್ರಿ. ಕಾಡ್ಗಿಚ್ಚಿನ ಭೀತಿ ಮತ್ತು ಅತಿಯಾದ ಮಳೆಯ ಕಾರಣ ಆಯಾ ಸೀಸನ್‌ಗಳಲ್ಲಿ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

