ರಕ್ಷಣೆ ನೀಡಬೇಕಾದ ಪೊಲೀಸರೇ ಬಡ ವ್ಯಾಪಾರಿಯ ಮೇಲೆ ದರ್ಪ ತೋರಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ. ಇಲ್ಲಿನ ಪೊಲೀಸ್ ಸಬ್ಇನ್ಸ್ಪೆಕ್ಟರ್ (SI) ಒಬ್ಬರು ರಸ್ತೆ ಬದಿ ಎಳೆನೀರು ಮಾರುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆತನ ಬಳಿಯಿದ್ದ ಎಳೆನೀರುಗಳನ್ನು ತಮ್ಮ ಖಾಸಗಿ ಕಾರಿಗೆ ಲೋಡ್ ಮಾಡಿಸಿಕೊಂಡು ಹೋಗಿರುವ ಗಂಭೀರ ಆರೋಪ ಕೇಳಿಬಂದಿದೆ.
ನಡೆದಿದ್ದೇನು?
ಅಮ್ರೋಹದ ರಸ್ತೆಯೊಂದರಲ್ಲಿ ಬಡ ವ್ಯಾಪಾರಿಯೊಬ್ಬ ಎಳೆನೀರು ಮಾರಾಟ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಎಸ್ಐ, ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಎಸ್ಐ ಅವರು ವ್ಯಾಪಾರಿಯನ್ನು ಕೆಟ್ಟದಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೆ ನಿಲ್ಲದ ಅಧಿಕಾರಿ, ವ್ಯಾಪಾರಿಯ ಜೀವನೋಪಾಯವಾಗಿದ್ದ ಎಳೆನೀರುಗಳನ್ನು ಬಲವಂತವಾಗಿ ಕಿತ್ತುಕೊಂಡು, ತಮ್ಮ ಖಾಸಗಿ ಕಾರಿನ ಡಿಕ್ಕಿಗೆ ತುಂಬಿಸಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
https://www.instagram.com/reel/DVxj5o8kQ8m/?utm_source=ig_web_copy_link&igsh=MzRlODBiNWFlZA==
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಇಡೀ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಇನ್ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಪೊಲೀಸರ ಈ ವರ್ತನೆ ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಯುಪಿ ಪೊಲೀಸರ ಅಧಿಕೃತ ಪೇಜ್ಗಳನ್ನು ಟ್ಯಾಗ್ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಇಲಾಖಾ ತನಿಖೆಗೆ ಆದೇಶ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಮ್ರೋಹ ಪೊಲೀಸ್ ವರಿಷ್ಠಾಧಿಕಾರಿಗಳು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.

