HomeIndiaಯುಪಿಎಸ್‌ಸಿ ಫಲಿತಾಂಶದಲ್ಲಿ ಭಾರಿ ಎಡವಟ್ಟು: ಅಟೆಂಡರ್ ಮಗಳು ಐಎಎಸ್ ಆದಳು ಎಂಬ ಸುದ್ದಿ ಸುಳ್ಳಾಗಿದ್ದು ಹೇಗೆ?...

ಯುಪಿಎಸ್‌ಸಿ ಫಲಿತಾಂಶದಲ್ಲಿ ಭಾರಿ ಎಡವಟ್ಟು: ಅಟೆಂಡರ್ ಮಗಳು ಐಎಎಸ್ ಆದಳು ಎಂಬ ಸುದ್ದಿ ಸುಳ್ಳಾಗಿದ್ದು ಹೇಗೆ? ಇಲ್ಲಿದೆ ಅಸಲಿ ಸತ್ಯ

ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ ಬುಲಂದ್‌ಶಹರ್ ಮೂಲದ ಯುವತಿಯೊಬ್ಬಳು 113ನೇ ರ್ಯಾಂಕ್ ಪಡೆದಿದ್ದಾಳೆ ಎಂಬ ಸುದ್ದಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ನಾಲ್ಕನೇ ದರ್ಜೆ ನೌಕರನ ಮಗಳು ಐಎಎಸ್ ಅಧಿಕಾರಿಯಾದಳು ಎಂದು ಸಂಭ್ರಮಿಸಿದ್ದ ನೆಟ್ಟಿಗರಿಗೆ ಈಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಆಡಳಿತ ಮಂಡಳಿಯ ತನಿಖೆಯ ನಂತರ ಈ ಸುಳ್ಳು ಸುದ್ದಿಯ ಅಸಲಿಯತ್ತು ಬಯಲಾಗಿದೆ.

ಸಂಭ್ರಮದ ಬೆನ್ನಲ್ಲೇ ಎದುರಾದ ಸಂಶಯ

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಶಿಖಾ ಗೌತಮ್ ಎಂಬಾಕೆ ತಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ 113ನೇ ರ್ಯಾಂಕ್ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದಳು. ತಂದೆ ಕಚೇರಿ ಅಟೆಂಡರ್ ಆಗಿದ್ದರಿಂದ ಈ ಸಾಧನೆಗೆ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಭಾರಿ ಪ್ರಚಾರ ನೀಡಿದ್ದರು. ಮನೆಗೆ ಹರಿದು ಬಂದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಲಾಗಿತ್ತು. ಆದರೆ ಯುಪಿಎಸ್‌ಸಿ ಅಭ್ಯರ್ಥಿಗಳ ಪೂರ್ಣ ಅಂಕಪಟ್ಟಿ ಮತ್ತು ವರ್ಗಗಳ ವಿವರ ಬಿಡುಗಡೆ ಮಾಡಿದಾಗ ಅಸಲಿ ಕಥೆ ಹೊರಬಂತು. 113ನೇ ರ್ಯಾಂಕ್ ಪಡೆದ ಅಭ್ಯರ್ಥಿಯು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರು, ಆದರೆ ಶಿಖಾ ಗೌತಮ್ ಬೇರೆ ವರ್ಗಕ್ಕೆ ಸೇರಿದ್ದಾಳೆ ಎಂಬುದು ಅನುಮಾನಕ್ಕೆ ಕಾರಣವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಸಲಿ ರ್ಯಾಂಕ್ ವಿಜೇತೆ ಹರಿಯಾಣದ ಶಿಖಾ ಸೆಹ್ರಾವತ್!

ತನಿಖೆಯ ವೇಳೆ ಹರಿಯಾಣದ ರೋಹ್ಟಕ್ ಮೂಲದ ಶಿಖಾ ಸೆಹ್ರಾವತ್ ಎಂಬುವವರೇ ನಿಜವಾದ 113ನೇ ರ್ಯಾಂಕ್ ವಿಜೇತೆ ಎಂಬುದು ಖಚಿತಪಟ್ಟಿದೆ. ಶಿಖಾ ಸೆಹ್ರಾವತ್ ಈಗಾಗಲೇ ರೋಹ್ಟಕ್‌ನ ಸಾಂಪ್ಲಾದಲ್ಲಿ ಬಿಡಿಪಿಒ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ರ್ಯಾಂಕ್ ಅನ್ನು ಬೇರೊಬ್ಬರು ತಮಗೇ ಬಂದಿದೆ ಎಂದು ಹೇಳಿಕೊಳ್ಳುತ್ತಿರುವುದನ್ನು ಗಮನಿಸಿದ ಹರಿಯಾಣದ ಶಿಖಾ, ಕೂಡಲೇ ಯುಪಿಎಸ್‌ಸಿಗೆ ಇಮೇಲ್ ಕಳುಹಿಸಿ ಸ್ಪಷ್ಟನೆ ಕೋರಿದ್ದರು. ಈ ದೂರಿನ ಮೇರೆಗೆ ಜಿಲ್ಲಾಡಳಿತ ತನಿಖೆ ನಡೆಸಿದಾಗ ಎಲ್ಲವೂ ಬಯಲಾಗಿದೆ.

ಹೆಸರು ಒಂದೇ ಇತ್ತು, ರೋಲ್ ನಂಬರ್ ಗಮನಿಸಲಿಲ್ಲ!

ತನಿಖಾಧಿಕಾರಿಗಳು ಉತ್ತರ ಪ್ರದೇಶದ ಶಿಖಾ ಗೌತಮ್ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಹೆಸರು ‘ಶಿಖಾ ರಾಣಿ’ ಎಂದು ದಾಖಲಾಗಿತ್ತು. ಅಷ್ಟೇ ಅಲ್ಲದೆ, ಆಕೆ ಮುಖ್ಯ ಪರೀಕ್ಷೆಯಲ್ಲೇ (Mains) ಉತ್ತೀರ್ಣಳಾಗಿರಲಿಲ್ಲ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಖಾ ಗೌತಮ್, “ರ್ಯಾಂಕ್ ಲಿಸ್ಟ್‌ನಲ್ಲಿ ಶಿಖಾ ಎಂಬ ಹೆಸರು ಕಂಡ ತಕ್ಷಣ ಸಂಭ್ರಮ ಪಟ್ಟೆ, ಆದರೆ ಪಕ್ಕದಲ್ಲಿದ್ದ ರೋಲ್ ನಂಬರ್ ಅನ್ನು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ” ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕಳೆದ ಕೆಲವು ದಿನಗಳ ಹಿಂದೆಯೂ ಬಿಹಾರದ ಅಭ್ಯರ್ಥಿಯೊಬ್ಬರು 301ನೇ ರ್ಯಾಂಕ್ ಬಗ್ಗೆ ಇಂತಹುದೇ ತಪ್ಪು ಮಾಹಿತಿ ನೀಡಿದ್ದರು. ಆ ಪ್ರಕರಣದ ಬೆನ್ನಲ್ಲೇ ನಡೆದ ಈ ಘಟನೆಯು ಯುಪಿಎಸ್‌ಸಿ ಫಲಿತಾಂಶದ ವೇಳೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular